Wednesday, January 07, 2026
Menu

ರಾಜ್ಯದ 5 ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ: ಕಲಾಪ ಸ್ಥಗಿತಗೊಳಿಸಿ ತಪಾಸಣೆ

bomb threat

ಬೆಂಗಳೂರು:  ರಾಜ್ಯದ ನಾನಾ 5 ನ್ಯಾಯಾಲಯಗಳಿಗೆ ಹುಸಿ ಬಾಂಬ್ ಬೆದರಿಕೆ ಬಂದ ಘಟನೆ ಮಂಗಳವಾರ ರಾಜ್ಯವನ್ನು ತಲ್ಲಣಗೊಳಿಸುವಂತೆ ಮಾಡಿತು.

ಧಾರವಾಡ ಹೈಕೋರ್ಟ್, ಬಾಗಲಕೋಟೆ, ಮೈಸೂರು, ಗದಗ ಮತ್ತು ಹಾಸನ ನ್ಯಾಯಾಲಯಗಳಿಗೆ ಮಂಗಳವಾರ ಇ-ಮೇಲ್ ಮೂಲಕ ಬೆದರಿಕೆ ಸಂದೇಶಗಳು ಬಂದಿದ್ದು, ಕಲಾಪ ಸ್ಥಗಿತಗೊಳಿಸಿ ಪೊಲೀಸರು ತಪಾಸಣೆ ನಡೆಸಿದರು.

ಭದ್ರತಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಶ್ವಾನ ದಳ, ಬಾಂಬ್ ಡಿಟೆಕ್ಟರ್‌ಗಳ ಮೂಲಕ ಶೋಧ ನಡೆಸಲಾಗಿದೆ. ತಪಾಸಣೆ ನಂತರ ಇದು ಹುಸಿ ಬಾಂಬ್ ಬೆದರಿಕೆ ಎಂಬುದು ದೃಢಪಟ್ಟಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚೆಗೆ ಶಾಲೆಗಳನ್ನು ಕೇಂದ್ರೀಕರಿಸಿ ಹುಸಿ ಬಾಂಬ್ ಬೆದರಿಕೆಗಳು ಬಂದ ನಂತರ ಈ ಬಾರಿ ನ್ಯಾಯಾಲಯಗಳನ್ನು ಗುರಿಯಾಗಿಸಿ ಬೆದರಿಕೆ ಕರೆಗಳು ಬಂದಿವೆ.

ಹಾಸನ ಜಿಲ್ಲಾ ನ್ಯಾಯಾಲಯಕ್ಕೆ ಬೆದರಿಕೆ

ಹಾಸನ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೂ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಮಾಹಿತಿ ದೊರಕಿದ ತಕ್ಷಣ ಪೊಲೀಸ್ ವಿಶೇಷ ಭದ್ರತಾ ಪಡೆ, ಶ್ವಾನದಳ ಹಾಗೂ ಬಾಂಬ್ ಪತ್ತೆ ದಳ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದೆ.

ಪರಿಶೀಲನೆ ಹಿನ್ನೆಲೆಯಲ್ಲಿ ಕೋರ್ಟ್ ಸಿಬ್ಬಂದಿ ನ್ಯಾಯಾಲಯದ ಹೊರಗೆ ಬಂದು ನಿಂತರು. ಈ ಹಿಂದೆ ಹಾಸನ ಜಿಲ್ಲಾಧಿಕಾರಿ ಕಚೇರಿ ಹಾಗೂ ಆಲೂರು ತಹಸೀಲ್ದಾರ್ ಕಚೇರಿಗೂ ಇದೇ ರೀತಿಯ ಬಾಂಬ್ ಬೆದರಿಕೆ ಇ-ಮೇಲ್‌ಗಳು ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ಧಾರವಾಡ ಹೈಕೋರ್ಟ್ ಪೀಠಕ್ಕೆ ಬೆದರಿಕೆ

ಧಾರವಾಡ ಹೈಕೋರ್ಟ್ ಪೀಠಕ್ಕೂ ಇ-ಮೇಲ್ ಮುಖಾಂತರ ಬಾಂಬ್ ಬೆದರಿಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಆವರಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಕೋರ್ಟ್ ಒಳಗೆ ಹಾಗೂ ಹೊರಗೆ ಪೊಲೀಸ್ ಬಂದುಬಸ್ತ್ ಹೆಚ್ಚಿಸಲಾಗಿದ್ದು, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿವೆ. ಭಯಭೀತರಾಗಿ ವಕೀಲರು ಹಾಗೂ ಸಾರ್ವಜನಿಕರು ಕೋರ್ಟ್ ಆವರಣದಿಂದ ಹೊರಗೆ ಬಂದಿದ್ದು, ಕೋರ್ಟ್ ಎದುರು ಜನಸಮೂಹ ಜಮಾಯಿಸಿದೆ.

ಧಾರವಾಡ ಎಸ್‌ಪಿ ಗುಂಜನ್ ಆರ್ಯ ಮಾತನಾಡಿ, “ಹೈಕೋರ್ಟ್ ಎಆರ್‌ಜಿ ಅವರಿಗೆ ಬೆಳಿಗ್ಗೆ ಬಾಂಬ್ ಬೆದರಿಕೆ ಮೇಲ್ ಬಂದಿದೆ. ಅವರು ತಡವಾಗಿ ಮೇಲ್ ನೋಡಿದ್ದು, ಮಧ್ಯಾಹ್ನ 12 ಗಂಟೆಗೆ ನಮಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕೋರ್ಟ್ ಒಳಗಡೆ ಮತ್ತು ಹೊರಗಡೆ ಪೊಲೀಸ್ ಬಂದುಬಸ್ತ್ ಮಾಡಿದ್ದೇವೆ. ಸುಮಾರು 1000ಕ್ಕೂ ಹೆಚ್ಚು ಜನರನ್ನು ಕೋರ್ಟ್ ಆವರಣದಿಂದ ಹೊರಗೆ ಕಳುಹಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳ, ಎಎಸ್‌ಟಿ ಟೀಮ್ ಸಂಪೂರ್ಣ ಪರಿಶೀಲನೆ ನಡೆಸುತ್ತಿದೆ. ಪೊಲೀಸ್ ಇಲಾಖೆ ತನಿಖೆ ಕೈಗೊಂಡಿದೆ”ಎಂದು ತಿಳಿಸಿದ್ದಾರೆ.

ಇದೇ ವೇಳೆ ಧಾರವಾಡ ಹೈಕೋರ್ಟ್ ಎಆರ್‌ಜಿ ಶಾಂತವೀರ ಶಿವಪ್ಪ ಅವರು ಮಾತನಾಡಿ, “ನಮಗೆ ಮೇಲ್ ಮೂಲಕ ಬೆದರಿಕೆ ಬಂದಿದೆ. ಮಧ್ಯಾಹ್ನ 1:55ಕ್ಕೆ ಬ್ಲಾಸ್ಟ್ ಮಾಡುವುದಾಗಿ ಉಲ್ಲೇಖಿಸಲಾಗಿತ್ತು. ಯಾವುದೇ ನಿರ್ಲಕ್ಷ್ಯ ಮಾಡಬಾರದೆಂದು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಸದ್ಯ ಪರಿಶೀಲನೆ ನಡೆಯುತ್ತಿದ್ದು, ಇದು ಹುಸಿ ಬಾಂಬ್ ಬೆದರಿಕೆ ಎನ್ನುವುದು ಗೊತ್ತಾಗಿದೆ” ಎಂದು ಹೇಳಿದ್ದಾರೆ.

ಗದಗದಲ್ಲಿ ‘ಆತ್ಮಾಹುತಿ ಬಾಂಬ್’ ಬೆದರಿಕೆ

ಗದಗ ಜಿಲ್ಲಾ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರ ಇ-ಮೇಲ್‌ಗೆ “ಆತ್ಮಾಹುತಿ ದಾಳಿ ಮೂಲಕ ಸ್ಫೋಟ ನಡೆಸಲಾಗುವುದು” ಎಂಬ ಸಂದೇಶ ಬಂದಿದೆ. ‘ವಿಕ್ರಂ ರಾಜಗುರು – ಔಟ್ ಲುಕ್ ಎಕ್ಸಪ್ರೆಸ್’ ಎಂಬ ಖಾತೆಯಿಂದ ಈ ಸಂದೇಶ ಬಂದಿದ್ದು, ಮಧ್ಯಾಹ್ನ 1:55ಕ್ಕೆ ಸ್ಫೋಟ ನಡೆಸುವುದಾಗಿ ಬೆದರಿಕೆ ಹಾಕಲಾಗಿದೆ.

ಸಂದೇಶ ಬಂದ ತಕ್ಷಣ ಸ್ಥಳಕ್ಕೆ ಶ್ವಾನದಳ, ಬಾಂಬ್ ಶೋಧನಾ ತಂಡ ದೌಡಾಯಿಸಿದ್ದು, ಕೋರ್ಟ್ ಕಲಾಪಗಳನ್ನು ಮುಂದೂಡಿ ಸಿಬ್ಬಂದಿ ಹೊರಗೆ ಬಂದಿದ್ದಾರೆ. ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಎಸ್‌ಪಿ ರೋಹನ್ ಜಗದೀಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, “ಸುಮಾರು ಮಧ್ಯಾಹ್ನ 12 ಗಂಟೆಗೆ ಸಂದೇಶ ಬಂದಿದೆ. ಮಾಹಿತಿ ತಿಳಿದ 10 ನಿಮಿಷಗಳಲ್ಲೇ ನಾವು ಸ್ಥಳಕ್ಕೆ ಭೇಟಿ ನೀಡಿದ್ದೇವೆ. ರೂಮ್‌ಗಳು, ಪಾರ್ಕಿಂಗ್ ಏರಿಯಾ ಸೇರಿದಂತೆ ಸಂಪೂರ್ಣ ಕೋರ್ಟ್ ಆವರಣವನ್ನು ಪರಿಶೀಲಿಸಲಾಗುತ್ತಿದೆ. ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟಿದ್ದೇವೆ”ಎಂದರು.

ಮೈಸೂರು ಜಿಲ್ಲಾ ನ್ಯಾಯಾಲಯಕ್ಕೂ ಬೆದರಿಕೆ ಕರೆ

ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಕ್ಕೂ ಬಾಂಬ್ ಬೆದರಿಕೆ ಕರೆ ಬಂದಿದೆ. ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಕೋರ್ಟ್ ಆವರಣದಲ್ಲಿದ್ದ ಎಲ್ಲರನ್ನು ಹೊರಕ್ಕೆ ಕಳುಹಿಸಿದರು.

ನ್ಯಾಯವಾದಿಗಳು, ಕಕ್ಷಿದಾರರು ಹಾಗೂ ಸಿಬ್ಬಂದಿ ಭಯಭೀತರಾಗಿ ಕೋರ್ಟ್ ಕಲಾಪ ಬಿಟ್ಟು ಹೊರಬಂದರು. ಬಾಂಬ್ ಸ್ಕ್ವಾಡ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನ್ಯಾಯಾಲಯದ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಭದ್ರತಾ ದೃಷ್ಟಿಯಿಂದ ಕೋರ್ಟ್ ಕಲಾಪಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಬಾಗಲಕೋಟೆ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

ಬಾಗಲಕೋಟೆಯ ನವನಗರದಲ್ಲಿರುವ ಜಿಲ್ಲಾ ನ್ಯಾಯಾಲಯದ ಕಚೇರಿ ಇ-ಮೇಲ್‌ಗೆ ಬಾಂಬ್ ಬೆದರಿಕೆ ಮೇಲ್ ಬಂದಿರುವುದು ಬೆಳಕಿಗೆ ಬಂದಿದೆ. “ನಿಮ್ಮ ಜಿಲ್ಲಾ ನ್ಯಾಯಾಲಯದ ಪ್ರಮುಖ ಹಾಗೂ ಕ್ರಿಟಿಕಲ್ ಸ್ಥಳಗಳಲ್ಲಿ ಬಾಂಬ್ ಇಡಲಾಗಿದೆ. ಮಧ್ಯಾಹ್ನದ ಊಟದ ಅವಧಿಯಲ್ಲಿ ನಮ್ಮ ಸಿಬ್ಬಂದಿಗಳು ಬ್ಲಾಸ್ಟ್ ಮಾಡುತ್ತಾರೆ” ಎಂದು ಬೆದರಿಕೆಯ ಮೇಲ್‌ನಲ್ಲಿ ಉಲ್ಲೇಖಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಅಧಿಕಾರಿಗಳು, ನ್ಯಾಯವಾದಿಗಳು, ಕಕ್ಷಿದಾರರು ಹಾಗೂ ನೌಕರರನ್ನು ತಕ್ಷಣವೇ ಕೋರ್ಟ್ ಆವರಣದಿಂದ ಹೊರಗೆ ಕಳುಹಿಸಲಾಯಿತು. ನ್ಯಾಯಾಲಯದ ಹೊರ ಆವರಣದಲ್ಲಿ ಜನರು ಜಮಾಯಿಸಿದ್ದು, ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಮಾಹಿತಿ ದೊರಕಿದ ತಕ್ಷಣ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಮೂಲಕ ಸಂಪೂರ್ಣ ತಪಾಸಣೆ ನಡೆಸಲಾಯಿತು.

Related Posts

Leave a Reply

Your email address will not be published. Required fields are marked *