ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ನಟ ಅಜಿತ್ ಕುಮಾರ್, ಅರವಿಂದ್ ಸ್ವಾಮಿ ಮತ್ತು ನಟಿ ಖುಷ್ಬು ಅವರ ನಿವಾಸಗಳನ್ನು ಗುರಿಯನ್ನಾಗಿಸಿಕೊಂಡು ಅಪರಿಚಿತ ಮೂಲಗಳಿಂದ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ.
ಡಿಜಿಪಿ ಕಚೇರಿಗೆ ಬಂದಿರುವ ಮೇಲ್ ಹಿನ್ನೆಲೆಯಲ್ಲಿ ಪೊಲೀಸರು ನಾಲ್ಕು ಸ್ಥಳಗಳಲ್ಲೂ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಾಥಮಿಕ ತಪಾಸಣೆಯಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ.
ಬೆದರಿಕೆ ಸಂದೇಶ ಮುಂದುವರಿಯುತ್ತಿರುವ ಹಿನ್ನೆಲೆ ಪೊಲೀಸ್ ಇಳಾಖೆ ತೀವ್ರ ನಿಗಾ ವಹಿಸಿದೆ. ಸಿಎಂ ನಿವಾಸ ಸೇರಿದಂತೆ ಎಲ್ಲ ಗಣ್ಯರ ಮನೆಗಳ ಸುತ್ತಮುತ್ತ ಕಾವಲು ಹೆಚ್ಚಿಸಿ, ಬಾಂಬ್ ನಿಷ್ಕ್ರೀಯ ದಳ ಹಾಗೂ ಶ್ವಾನ ದಳಗಳಿಂದ ಸಮಗ್ರ ತಪಾಸಣೆ ನಡೆಸಲಾಗಿದೆ.
ಕಳೆದ ವಾರ ಚೆನ್ನೈನಲ್ಲಿರುವ ನಟ ಅಜಿತ್ ಕುಮಾರ್ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಅಪರಿಚಿತ ವ್ಯಕ್ತಿ ನೀಡಿದ್ದ ಮಾಹಿತಿ ಆಧರಿಸಿ ಅಧಿಕಾರಿಗಳು ತಕ್ಷಣವೇ ಶೋಧ ನಡೆಸಿ ಪೂರ್ವ ಕರಾವಳಿ ರಸ್ತೆಯಲ್ಲಿರುವ ಅಜಿತ್ ಅವರ ಮನೆಗೆ ಬಾಂಬ್ ಸ್ಕ್ವಾಡ್ ಕಳುಹಿಸಿದ್ದರು. ಹುಸಿ ಬೆದರಿಕೆ ಎಂದು ದೃಢಪಟ್ಟಿತ್ತು.
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ ನಟ ವಿಜಯ್ ಅವರಿಗೂ ಬೆದರಿಕೆ ಸಂದೇಶಗಳು ಬರುತ್ತಲೇ ಇವೆ. ಇತ್ತೀಚೆಗಷ್ಟೇ ವಿಜಯ್ ಅವರ ನಿವಾಸದಲ್ಲಿ ಬಾಂಬ್ ಇಡಲಾಗಿದೆ ಎಂದು ಚೆನ್ನೈ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿತ್ತು. ಬಾಂಬ್ ನಿಷ್ಕ್ರೀಯ ದಳದ ಸದಸ್ಯರು ಮತ್ತು ಸ್ನಿಫರ್ ನಾಯಿ ವಿಜಯ್ ಅವರ ಮನೆಗೆ ಧಾವಿಸಿತು. ತಪಾಸಣೆ ನಂತರ ಇದೊಂದು ಹುಸಿ ಸಂದೇಶ ಎಂಬುದು ತಿಳಿದು ಬಂದಿತ್ತು.


