ಸಾಂಸ್ಕೃತಿಕ ನಗರಿ ಮೈಸೂರಿನ ಹಳೆ ನ್ಯಾಯಾಲಯಕ್ಕೆ ಹುಸಿ ಬಾಂಬ್ ಕರೆ ಬಂದ ಹಿನ್ನೆಲೆಯಲ್ಲಿ ಕೋರ್ಟ್ ಕಲಾಪ ಬಹಿಷ್ಕರಿಸಿ ಎಲ್ಲರೂ ಹೊರ ಬಂದ ಘಟನೆ ನಡೆದಿದೆ. ಎಂದಿನಂತೆ ಹಳೆ ಕೋರ್ಟ್ ನಲ್ಲಿ ಕಲಾಪಗಳು ನಡೆಯುತ್ತಿದ್ದವು. ಈ ವೇಳೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದೆ. ಈ ಹಿನ್ನಲೆಯಲ್ಲಿ ಕೋರ್ಟ್ ಕಲಾಪಗಳನ್ನು ಅರ್ಧಕ್ಕೆ ಮೊಟಕುಗೊಳಿಸಿ ಎಲ್ಲರೂ ಹೊರ ಬಂದಿದ್ದಾರೆ.
ಇನ್ನೂ ಒಮ್ಮೆಲೆ ವಕೀಲರೆಲ್ಲರೂ ರಸ್ತೆಗೆ ಬಂದಿದ್ದು, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ, ಪೊಲೀಸ್ ಅಧಿಕಾರಿಗಳ ತಂಡವೇ ಆಗಮಿಸಿದೆ. ಸಮೀಪದಲ್ಲೇ ಮುಖ್ಯಮಂತ್ರಿ ಕಾರ್ಯಕ್ರಮವಿದ್ದು, ಇಂತಹ ವೇಳೆ ನ್ಯಾಯಾಲಯದ ಕಟ್ಟಡಕ್ಕೆ ಬೆದರಿಕೆ ಕರೆ ಬಂದಿರುವುದು ಎಲ್ಲರನ್ನೂ ಗಾಬರಿಗೊಳಿಸಿದೆ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ಶಾಲೆ, ಕಾಲೇಜು, ಮಾಲ್‌ಗಳಿಗೆ ಬಾಂಬ್ ದಾಳಿ ಹುಸಿ ಕರೆಗಳು ಆಗಾಗ ಬರುತ್ತಿವೆ. ಕಳೆದ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿಗೆ ಭೇಟಿ ನೀಡಿರುವ ಸಂದರ್ಭ ದಲ್ಲೇ ಸರಗೂರು ತಾಲೂಕು ಕಚೇರಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿರುವುದು ಆತಂಕ ಸೃಷ್ಟಿಸಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸರಗೂರು ತಾಲೂಕು ಕಚೇರಿಗೆ ಆರ್‌ಡಿಎಕ್ಸ್ ಬಾಂಬ್ ಇಟ್ಟಿದ್ದು, ಮಧ್ಯಾಹ್ನ ಸ್ಫೋಟವಾಗಲಿದೆ ಎಂದು ಇ-ಮೇಲ್ ಮೂಲಕ ಬೆದರಿಕೆ ಬಂದಿದೆ. ಅದರಲ್ಲಿ ನಟ ಅಜಿತ್ ಕುಮಾರ್ ಹೆಸರನ್ನೂ ಉಲ್ಲೇಖಿಸಲಾಗಿದೆ. ಅವರ ಚೆನ್ನೈನ ನಿವಾಸದಲ್ಲೂ ಬಾಂಬ್ ಸ್ಫೋಟಿಸಲಿದೆ, ತಕ್ಷಣ ಸ್ಥಳಾಂರತಗೊಳ್ಳಿ ಎಂದು ಹೇಳಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದ್ದಾರೆ.
ಡಿ.12ರಂದು ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಬಂದ ಬಾಂಬ್ ಬೆದರಿಕೆ ಇಮೇಲ್ ಬಂದಿತ್ತು, ಜಿಲ್ಲಾಡಳಿತ ಹಾಗೂ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಶೋಧ ನಡೆಸಿ ಹುಸಿ ಬೆದರಿಕೆ ಎಂದು ಪತ್ತೆ ಮಾಡಿದ್ದರು. ಡಿ.15ರಂದು ಗದಗ ಜಿಲ್ಲಾಡಳಿತ ಭವನ ಸ್ಫೋಟಿಸುವುದಾಗಿ ಡಿಸಿ ಕಚೇರಿಗೆ ಇ-ಮೇಲ್ ಬಂದಿತ್ತು. ಐಎಸ್ಐ ಮತ್ತು ಎಲ್ಟಿಟಿಇ ಕಾರ್ಯಕರ್ತರ ಜೊತೆ ಸೇರಿ 5 ಬಾಂಬ್ ಉಡಾಯಿಸಿ ಜಿಲ್ಲಾಡಳಿತ ಭವನ ಸ್ಫೋಟಿಸುವುದಾಗಿ ಬೆದರಿಕೆ ಬಂದಿತ್ತು.
ಮಂಗಳೂರಿಗೂ ಇದೇ ರೀತಿ ಬೆದರಿಕೆ ಕರೆ ಬಂದಿತ್ತು, ಉತ್ತರ ಕನ್ನಡದ ಭಟ್ಕಳ ಮತ್ತು ತುಮಕೂರಿನ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರ ಅಧಿಕೃತ ಇ-ಮೇಲ್ ಐಡಿಗೂ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಪೊಲೀಸರು ತೀವ್ರ ತಪಾಸಣೆ ನಡೆಸಿ ದ್ದರು. ಎಲ್ಲಾ ಇ-ಮೇಲ್ಗಳೂ ಹುಸಿ ಬೆದರಿಕೆಗಳೆಂದು ತನಿಖೆಯಲ್ಲಿ ಗೊತ್ತಾಗಿತ್ತು.


