ದೆಹಲಿಯಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಕೆಕೆ ಎಕ್ಸ್ಪ್ರೆಸ್ ರೈಲಿಗೆ ವ್ಯಕ್ತಿಯೊಬ್ಬ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದು, ಆತನನ್ನು ಬಂಧಿಸಲಾಗಿದೆ. ಮಧ್ಯರಾತ್ರಿ ಒಂದು ಗಂಟೆಗೆ ಹುಸಿ ಬಾಂಬ್ ಕರೆ ಬಂದ ಕೂಡಲೇ ವಾಡಿ ಜಂಕ್ಷನ್ ಬಳಿ ರೈಲ್ವೆ ಪೊಲೀಸರು ತಪಾಸಣೆ ನಡೆಸಿ ಹುಸಿಬಾಂಬ್ ಕರೆ ಎಂಬುದನ್ನು ದೃಢಪಡಿಸಿದ್ದಾರೆ. ಹುಸಿ ಬಾಂಬ್ ಕರೆ ಮಾಡಿದ ಆರೋಪಿ ಉತ್ತರ ಪ್ರದೇಶ ಮೂಲದ ದೀಪಕ್ ಸಿಂಗ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಆರೋಪಿ ದೆಹಲಿ-ಬೆಂಗಳೂರು ಮಾರ್ಗವಾಗಿ ಸಂಚರಿಸುವ ಕೆಕೆ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ.ಈ ವೇಳೆ ಭಾನುವಾರ ಬೆಳಿಗ್ಗೆ ರೈಲ್ವೆ ನಿಯಂತ್ರಣ ಕೊಠಡಿಗೆ ರೈಲಿನಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಕರೆ ಮಾಡಿ ಭೀತಿಯುಂಟು ಮಾಡಿದ್ದ. ಪೊಲೀಸ್ ಅಧಿಕಾರಿಗಳು ರೈಲನ್ನು ವಾಡಿ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿ ನಾಲ್ಕು ಗಂಟೆ ಸಂಪೂರ್ಣ ಭದ್ರತಾ ತಪಾಸಣೆ ಮಾಡಿದ್ದಾರೆ.
ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ ಸ್ಥಳಕ್ಕೆ ದೌಡಾಸಿದ್ದು, ರೈಲಿನ ಎಲ್ಲಾ 22 ಬೋಗಿಗಳನ್ನು ಪರಿಶೀಲಿಸಿದೆ. ತಪಾಸಣೆ ವೇಳೆ ಪ್ರಯಾಣಿಕರನ್ನು ಕೆಳಗಿಳಿಸಲಾಗಿತ್ತು. ಈ ವೇಳೆ ಯಾವುದೇ ಸ್ಫೋಟಕಗಳು ಕಂಡುಬಂದಿಲ್ಲ ಮತ್ತು ಹುಸಿ ಬಾಂಬ್ ಕರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾ ಗಿದ್ದು, ದೀಪ್ ಸಿಂಗ್ ರಾಥೋಡ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.