ಬೆಂಗಳೂರಿನ ಹಲಸೂರು ಕೆರೆ ಬಳಿ ಇರುವ ಗುರುಸಿಂಗ್ ಸಭಾ ಗುರುದ್ವಾರಕ್ಕೆ ಬಾಂಬ್ ಬೆದರಿಕೆ ಬಂದಿರುವುದಾಗಿ ದೂರು ದಾಖಲಾಗಿದೆ. ಗುರುದ್ವಾರದ ಬಾತ್‌ರೂಂನಲ್ಲಿ ಆರ್‌ಡಿಎಕ್ಸ್ ಇಟ್ಟಿರುವುದಾಗಿ De-Brahminize Dravidistan ಎಂಬ ಸಂಘಟನೆಯಿಂದ ಬೆದರಿಕೆ ಬಂದಿದೆ ಎಂದು ಹೇಳಲಾಗಿದೆ. ಇದು ಬ್ರಾಹ್ಮಣ ವಿರೋಧಿ ಸಂಘಟನ ಎಂದು ಹೇಳಲಾಗುತ್ತಿದೆ.
4 ಆರ್‌ಡಿಎಕ್ಸ್ ಎಲ್‌ಇಡಿಯಿಂದ ಬ್ಲಾಸ್ಟ್ ಮಾಡುವುದಾಗಿ ಹೆದರಿಸಲಾಗಿದೆ ಎಂದು ಋಷಿಪಾಲ್ ಸಿಂಗ್ ದೂರಿನಲ್ಲಿ ತಿಳಿಸಿದ್ದಾರೆ. ಗುರುದ್ವಾರದ ಅಧಿಕೃತ ಮೇಲ್ ಐಡಿಗೆ ರಾಜ ಗಿರಿ ಎಂಬಾತನ ಹೆಸರಿನಲ್ಲಿ ತಮಿಳುನಾಡಿನಿಂದ ಬೆದರಿಕೆ ಸಂದೇಶ ಬಂದಿದ್ದು, ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಆರು ದಿನಗಳ ಹಿಂದೆ ಬೆಂಗಳೂರು ನಗರದ ಸಿವಿಲ್ ನ್ಯಾಯಾಲಯಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಅದೊಂದು ಹುಸಿ ಬಾಂಬ್ ಬೆದರಿಕೆ ಎಂಬುದನ್ನು ಪೊಲೀಸ್ ಪತ್ತೆ ಹಚ್ಚಿತ್ತು. ಜುಲೈ 27ರಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕಚೇರಿ ಮತ್ತು ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ತಿಂಗಳ ಹಿಂದೆ ಬೆಂಗಳೂರಿನ 40 ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿತ್ತು. ಅದೂ ಕೂಡ ಹುಸಿ ಬಾಂಬ್ ಬೆದರಿಕೆ ಎಂಬುದು ಗೊತ್ತಾಗಿತ್ತು.