ಮುಂಬೈ: ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ದಾಳಿಗೆ ಬಳಸಿದ ಆಪರೇಷನ್ ಸಿಂಧೂರ ಹೆಸರಿನ ಟೈಟಲ್ ಪಡೆಯಲು ಸುಮಾರು 15 ಸಿನಿಮಾ ಪ್ರೊಡಾಕ್ಷನ್ ಕಂಪನಿಗಳು ಮುಗಿಬಿದ್ದಿವೆ.
ಬಾಲಿವುಡ್ ನ ಪ್ರತಿಷ್ಠಿತ ಸಿನಿಮಾ ತಯಾರಕ ಸಂಸ್ಥೆಗಳು ಸೇರಿದಂತೆ 15 ಸಂಸ್ಥೆಗಳು ಆಪರೇಷನ್ ಸಿಂಧೂರ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿವೆ.
ಮಹವೀರ್ ಜೈನ್ ಒಡೆತನದ ಕಂಪನಿ ಸೇರಿದಂತೆ ಟೀ ಸೀರೀಸ್, ಜೀ ಸ್ಟೂಡಿಯೋಸ್, ಮಧುರ್ ಬಂಡಾರ್ಕರ್ ಮುಂತಾದ ಪ್ರತಿಷ್ಠಿತ ಸಿನಿಮಾ ತಯಾರಕ ಕಂಪನಿಗಳು ನೋಂದಣಿ ಸಲ್ಲಿಸಿದ ಪ್ರಮುಖ ಸಂಸ್ಥೆಗಳಾಗಿವೆ.
ಸಾಮಾನ್ಯವಾಗಿ ದೇಶದಲ್ಲಿ ಯಾವುದೇ ಮಹತ್ವದ ಘಟನೆ ನಡೆದಾಗ ಅದರಲ್ಲೂ ಇತ್ತೀಚೆಗೆ ಭಾರತೀಯ ಸೇನೆ ಅತ್ಯಂತ ಯಶಸ್ವಿಯಾಗಿ ನಡೆಸಿದ ಕಾರ್ಯಾಚರಣೆ ಹಾಗೂ ಉಗ್ರರ ದಾಳಿಗೆ ಸಂಬಂಧಿಸಿದ ಟೈಟಲ್ ಗಳಿಗಾಗಿ ಸಿನಿಮಾ ಸಂಸ್ಥೆಗಳು ಮುಂದಾಗುವುದು ಸಹಜ ಎಂದು ಸಿನಿಮಾ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಬಿಎನ್ ತಿವಾರಿ ತಿಳಿಸಿದ್ದಾರೆ.
ನಾವು ಸಿನಿಮಾ ಮಾಡುತ್ತೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಯಾವುದೇ ಸಿನಿಮಾ ಮಾಡಬೇಕಾದರೂ ಟೈಟಲ್ ಅತ್ಯಂತ ಪ್ರಮುಖವಾಗುತ್ತದೆ. ಟೈಟಲ್ ಸಿಗದೇ ಎಷ್ಟೋ ಸಿನಿಮಾಗಳು ಮಾಡಲು ಆಗಲೇ ಇಲ್ಲ. ಆದ್ದರಿಂದ ಪ್ರಮುಖ ಘಟನೆಯಾದಾಗ ಆ ಹೆಸರಿನ ನೋಂದಣಿ ಮಾಡಿಕೊಂಡು ಮುಂಜಾಗೃತೆ ಕೈಗೊಳ್ಳುವುದು ಸಿನಿಮಾದಲ್ಲಿ ಮಾಮೂಲು ಎಂದು ನಿರ್ಮಾಪಕ ಅಶೋಕ್ ಪಂಡಿತ್ ತಿಳಿಸಿದ್ದಾರೆ.