ಬಾಲಿವುಡ್ನ ಹೆಸರಾಂತ ನಟ ಧರ್ಮೇಂದ್ರ ನಿಧನರಾದರು. ಅವರಿಗೆ 89 ವರ್ಷವಾಗಿತ್ತು. ಧರ್ಮೇಂದ್ರ ಅನಾರೋಗ್ಯ ಪೀಡಿತರಾಗಿ ಮುಂಬೈನ ಬ್ರೀಜ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇತ್ತೀಚೆಗೆ ಮನೆಗೆ ಹಿಂದಿರುಗಿದ್ದರು, ಆದರೂ ಅವರ ಆರೋಗ್ಯದಲ್ಲಿ ಚೇತರಿಕೆಯಾಗದೆ ಇಂದು ಮಧ್ಯಾಹ್ನ ಮೃತಪಟ್ಟಿದ್ದಾರೆ. ಅವರ ಅಂತ್ಯಕ್ರಿಯೆ ಪವನ್ ಹನ್ಸ್ ಸ್ಮಶಾನದಲ್ಲಿ ನಡೆಯಲಿದೆ.
ಧರ್ಮೇಂದ್ರ ಅವರ ಪೂರ್ಣ ಹೆಸರು ಧರ್ಮೇಂದ್ರ ಕೇವಲ್ ಕೃಷ್ಣ ಡಿಯೋಲ್. ಡಿಸೆಂಬರ್ 8, 1935 ರಂದು ಪಂಜಾಬ್ನ ನಸ್ರಾನಿ ಗ್ರಾಮದಲ್ಲಿ ಜನಿಸಿದ್ದರು. ಆರು ದಶಕಗಳಿಗೂ ಹೆಚ್ಚು ಕಾಲ ಬಾಲಿಪುಡ್ನ ಸ್ಟಾರ್ ಆಗಿ ಮೆರೆದಿದ್ದ ಧರ್ಮೇಂದ್ರ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಎವರ್ಗ್ರೀನ್ ಹೀರೋ ಆಗಿದ್ದ ಧರ್ಮೇಂದ್ರ ನಟಿಸಿದ ಬಹುತೇಕ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ. ಶೋಲೆ, ಚುಪ್ಕೆ ಚುಪ್ಕೆ, ಸತ್ಯಕಂ, ಸೀತಾ ಔರ್ ಗೀತಾ, ಯಾದೋಂಕಿ ಭಾರತ್, ಡ್ರೀಮ್ ಗರ್ಲ್, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ, ಮೇ ಪ್ಯಾರ್ ಕಿಯಾ ಪಿರ್ಸೆ… ಹೀಗೆ ಅನೇಕ ಸಿನಿಮಾಗಳಲ್ಲಿನ ನಟನೆ ಅಭಿಮಾನಿಗಳ ಮನ ಸೂರೆಗೊಂಡಿತ್ತು.
ಪತ್ನಿ ಹೇಮಮಾಲಿನಿ, ಮಕ್ಕಳಾದ ಸನ್ನಿ ಡಿಯೋಲ್, ಬಾಬ್ಬಿ ಡಿಯೋಲ್, ಇಶಾ ಡಿಯೋಲ್, ವಿಜೇತ ಡಿಯೋಲ್ಅಹನಾ ಡಿಯೋಲ್, ಅಜೈತ ಡಿಯೋಲ್ ಸೇರಿದಂತೆ ಅಪಾರ ಬಂಧುಮಿತ್ರರು, ಅಭಿಮಾನಿ ವರ್ಗವನ್ನು ಅಗಲಿದ್ದಾರೆ.
ಧರ್ಮೇಂದ್ರ ಅವರ ಕಿರಿಯ ಮಗ, ನಟ ಬಾಬಿ ಡಿಯೋಲ್ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ʻಮುಂಬೈ ಸಮೀಪದ ಖಂಡಾಲಾದಲ್ಲಿರುವ ಫಾರ್ಮ್ ಹೌಸ್ನಲ್ಲಿ ತಮ್ಮ ಮೊದಲ ಪತ್ನಿ ಪ್ರಕಾಶ್ ಕೌರ್ ಅವರೊಂದಿಗೆ ತಂದೆ ಧರ್ಮೇಂದ್ರ ಅವರು ವಾಸಿಸುತ್ತಿದ್ದಾರೆ ಎಂದು ಹೇಳಿದ್ದರು.


