ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಖಾಸಗಿ ವೀಡಿಯೊ ತೋರಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಮಾಜಿ ಪ್ರಿಯಕರನನ್ನು ಮಹಿಳೆ ಕೊಂದು ಮುಖಕ್ಕೆ ಆ್ಯಸಿಡ್ ಹಾಕಿರುವ ಘಟನೆ ನಡೆದಿದೆ. ವಿವಾಹಿತ ಮಹಿಳೆ ಸಂಬಂಧ ಕೊನೆಗೊಳಿಸಲು ಪ್ರಯತ್ನಿಸಿದಾಗ ಆಕೆಗೆ ಬ್ಲ್ಯಾಕ್ಮೇಲ್ ಮಾಡಿದ್ದ, ಆಕೆ ತನ್ನ ಸೋದರ ಮತ್ತು ಅತ್ತಿಗೆಯ ಸಹಾಯದಿಂದ ಕೊಲೆ ಮಾಡಿದ್ದಾಳೆ.
ಮಹಿಳೆಯು ಗ್ರಾಮಕ್ಕೆ ಬರುವಂತೆ ಕರೆದು ಕತ್ತು ಹಿಸುಕಿ ಕೊಂದು ಗುರುತು ಸಿಗಬಾರದೆಂದು ಆಸಿಡ್ನಿಂದ ಮುಖವನ್ನು ವಿರೂಪಗೊಳಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಕೊಲೆಯಾದ ವ್ಯಕ್ತಿ ಪಂಕಜ್ ಗುಪ್ತಾ, ಅಜಮ್ಗಢ ನಿವಾಸಿಯಾಗಿದ್ದು, ಹಳ್ಳಿಯ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ. ಮಹಿಳೆ ಸಂಬಂಧನ್ನು ಕೊನೆಗೊಳಿಸಲು ಪ್ರಯತ್ನಿಸಿದ್ದಳು, ಆದರೆ ಆತ ಅಶ್ಲೀಲ ವೀಡಿಯೊಗಳನ್ನು ಬಳಸಿ ಆಕೆಗೆ ಬ್ಲ್ಯಾಕ್ಮೇಲ್ ಮಾಡಲು ಪ್ರಾರಂಭಿಸಿ ಕಿರುಕುಳ ನೀಡುತ್ತಿದ್ದ.
ಬೆದರಿಕೆಗೆ ಬೇಸತ್ತು ಮಹಿಳೆಯು ಸಹೋದರ ಮತ್ತು ಅತ್ತಿಗೆಗೆ ವಿಷಯ ತಿಳಿಸಿದ್ದು, ಎಲ್ಲರೂ ಸೇರಿ ಫೆಬ್ರವರಿ 5 ರಂದು ವಿವಾಹ ಸಮಾರಂಭದಲ್ಲಿ ಆತನನ್ನು ಕೊಲ್ಲಲು ಯೋಜನೆ ರೂಪಿಸಿದ್ದರು. ಫೆಬ್ರವರಿ 7 ರಂದು ನೆಪ ಹೇಳಿ ಗ್ರಾಮಕ್ಕೆ ಕರೆತಂದು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ಮೃತದೇಹವನ್ನು ಎಸೆಯುವ ಮೊದಲು ಮುಖವನ್ನು ವಿರೂಪಗೊಳಿಸಿ ಸಾಕ್ಷ್ಯ ನಾಶಮಾಡಲು ಪ್ರಯತ್ನಿಸಿದ್ದಾರೆ, ಮಹಿಳೆ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ, ಉಳಿದ ಶಂಕಿತರ ಬಂಧನಕ್ಕೆ ಕಾರ್ಯಾಚರಣೆ ನಡೆಯುತ್ತಿರುವುದಾಗಿ ಹೇಳಿದ್ದಾರೆ.


