ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣಿಸಿದ್ದ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ದೃಢಪಡಿಸಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಹಾಗೂ ವಿಧಿವಿಜ್ಞಾನ ಅಧಿಕಾರಿಗಳು ಬಾರಾಮತಿಯಲ್ಲಿ ಅಪಘಾತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ವಿಮಾನದಲ್ಲಿದ್ದ ಕಪ್ಪು ಪೆಟ್ಟಿಗೆ ಪತ್ತೆಯಾಗಿದ್ದು, ತನಿಖಾಧಿಕಾರಿಗಳು ಡಿಕೋಡ್ ಮಾಡುವ ಪ್ರಕ್ರಿಯೆ ಆರಂಭಿಸಿದ್ದಾರೆ.
ಕಪ್ಪು ಪೆಟ್ಟಿಗೆಯಲ್ಲಿ ಎರಡು ಮುಖ್ಯ ಭಾಗಗಳಿವೆ. ಒಂದು ಫ್ಲೈಟ್ ಡೇಟಾ ರೆಕಾರ್ಡರ್ ಇದು ವಿಮಾನದ ವೇಗ, ಎತ್ತರ, ಇಂಧನ ಬಳಕೆ, ದಿಕ್ಕು ಸೇರಿದಂತೆ ತಾಂತ್ರಿಕ ಮಾಹಿತಿ ದಾಖಲಿಸುತ್ತದೆ. ಕಾಕ್ಪಿಟ್ ವಾಯ್ಸ್ ರೆಕಾರ್ಡರ್ ಪೈಲಟ್ಗಳ ನಡುವಿನ ಸಂಭಾಷಣೆ, ಎಚ್ಚರಿಕೆ ಧ್ವನಿಗಳು ಮತ್ತು ಅಪಘಾತದ ಕೊನೆಯ ಕ್ಷಣಗಳ ಶಬ್ದಗಳನ್ನು ದಾಖಲಿಸುತ್ತದೆ. ಇವನ್ನು ವಿಶ್ಲೇಷಿಸಲು ಕನಿಷ್ಠ 3 ರಿಂದ 4 ವಾರಗಳು ಬೇಕಾಗುತ್ತದೆ ಎಂದು ಅಧಿಕಾರಿಗಳು ನೀಡಿದ್ದಾರೆ.
ಅಜಿತ್ ಪವಾರ್ ಅಂತ್ಯಕ್ರಿಯೆ
ಅಜಿತ್ ಪವಾರ್ ಅವರ ಅಂತ್ಯಕ್ರಿಯೆ ಪುಣೆ ಜಿಲ್ಲೆಯ ಬಾರಾಮತಿ ವಿದ್ಯಾ ಪ್ರತಿಷ್ಠಾನದ ಕ್ರೀಡಾ ಮೈದಾನದಲ್ಲಿ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಂ ದೇವೆಂದ್ರ ಫಡ್ನವೀಸ್, ಶರದ್ ಪವಾರ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.
ಪಾರ್ಥಿವ ಶರೀರವನ್ನು ಬಾರಾಮತಿಯ ಪುಣ್ಯಶ್ಲೋಕ್ ಅಹಲ್ಯಾದೇವಿ ಆಸ್ಪತ್ರೆಯಿಂದ ಬಾರಾಮತಿಯ ಬಳಿಯ ಅವರ ಕಟೇವಾಡಿ ಗ್ರಾಮಕ್ಕೆ ಕೊಂಡೊಯ್ಯಲಾಯಿತು. ಅಂತ್ಯಕ್ರಿಯೆಗೂ ಮುನ್ನ ಬಾರಾಮತಿಯಲ್ಲಿ ಮೆರವಣಿಗೆ ನಡೆದಿದ್ದು, ಲಕ್ಷಾಂತರ ಮಂದಿ ನಮನ ಸಲ್ಲಿಸಿದರು. ಮೃತದೇಹವನ್ನು ರಾಷ್ಟ್ರೀಯ ಧ್ವಜದಿಂದ ಸುತ್ತಿ ಸೇನಾ ಸಿಬ್ಬಂದಿ ಗೌರವ ಸಲ್ಲಿಸಿದರು.
ಮುಂಬೈನಿಂದ ಬಾರಾಮತಿಗೆ ಹೊರಟಿದ್ದ ವಿಮಾನ ಬುಧವಾರ ಬೆಳಗ್ಗೆ ಪತನಗೊಂಡು ಎನ್ಸಿಪಿ ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮೃತಪಟ್ಟಿದ್ದಾರೆ. ಪೈಲಟ್ಗಳು ಮತ್ತು ಪವಾರ್ ಅವರ ಭದ್ರತಾ ಸಿಬ್ಬಂದಿ ಸೇರಿದಂತೆ ಇತರ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಅಜಿತ್ ಪವಾರ್ ಬಳಸುತ್ತಿದ್ದ ವಿಮಾನವು ಬಾರಾಮತಿ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಪ್ರಯತ್ನಕ್ಕೆ ಮುಂದಾಗಿದ್ದಾಗ ಪತನಗೊಂಡಿದೆ. ವಿಮಾನವು ಸಂಪೂರ್ಣ ಸುಟ್ಟು ಕರಕಲಾಗಿದೆ.


