ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸತೀಶ್ ಜಾರಕಿಹೊಳಿ ಉತ್ತರಾಧಿಕಾರಿ ಆದರೆ ಬಹಳ ಸಂತೋಷ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಸತೀಶ್ ಉತ್ತರಾಧಿಕಾರಿಯಾಗುತ್ತಾರೆ ಎಂಬ ಚರ್ಚೆ ಕುರಿತ ಪ್ರಶ್ನೆಗೆ ಉತ್ತರಿಸಿದರು. ಸತೀಶ್ ಅಹಿಂದ ಪರ ಧ್ವನಿ ಎತ್ತುವವರು. ಮೌಢ್ಯ, ಮೂಢನಂಬಿಕೆ ವಿರುದ್ಧ ಹೋರಾಟ ಮಾಡುವವರು. ದುರ್ಬಲ ವರ್ಗದವರ ಬಗ್ಗೆ ಕಾಳಜಿ ಇರುವವರು. ಸಿದ್ದರಾಮಯ್ಯ ಅವರಿಗೆ ಯಾರಾದರೂ ಉತ್ತರಾಧಿಕಾರಿ ಬೇಕಲ್ಲವೇ. ಅದು ಸತೀಶ್ ಆದರೆ ಬಹಳ ಸಂತೋಷ ಎಂದರು.
ಸಿದ್ದರಾಮಯ್ಯನವರೇ ಅಹಿಂದ ಸಮುದಾಯದ ನಿರ್ವಿವಾದ ನಾಯಕರಾಗಿರುವಾಗ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಮುಂದಿನ ನಾಯಕ ಎಂದು ಹರಿಪ್ರಸಾದ್ ಬೆಂಬಲಿಸಿ ನೀಡಿದ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿದೆ.

ಈಗ ನಮ್ಮ ನಾಯಕರಾಗಿ ಸಿದ್ದರಾಮಯ್ಯ ಇದ್ದಾರೆ. ಹೀಗಿರುವಾಗ ಬೇರೆ ನಾಯಕತ್ವದ ಬಗ್ಗೆ ಚರ್ಚೆ ಅನಗತ್ಯ, ಸಿದ್ದರಾಮಯ್ಯ ಕಿಂಗ್. ಕಿಂಗ್ ಇಸ್ ಎ ಲೈವ್. ಹರಿಪ್ರಸಾದ್ ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ.ಪ್ರಸ್ತುತ ಸಿದ್ದರಾಮಯ್ಯನವರೇ ಅಹಿಂದ ಸಮುದಾಯದ ನಿರ್ವಿವಾದ ನಾಯಕ . ನಮ್ಮ ನಾಯಕನಾಗಿ ಯಾರು ಇರಬೇಕು, ಮುಂದಿನ ನಾಯಕರಾಗಿ ಯಾರು ಬರಬೇಕು ಎಂಬುದನ್ನು ಸ್ವತಃ ಸಿದ್ದರಾಮಯ್ಯನವರೇ ಸ್ಪಷ್ಟಪಡಿಸಬೇಕು ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗುತ್ತಾರೆ ಎಂಬ ಯತೀಂದ್ರ ಸಿದ್ದರಾಮಯ್ಯನವರ ಹೇಳಿಕೆ ಕುರಿತೂ ಪ್ರತಿಕ್ರಿಯಿಸಿದ ಬೈರತಿ ಸುರೇಶ್, ನಾಯಕತ್ವದ ಅಂತಿಮ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದಿದ್ದಾರೆ..
ಸದ್ಯದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯನವರ ನಾಯಕತ್ವಕ್ಕೆ ಸವಾಲು ಒಡ್ಡುವುದು ಅಥವಾ ಹೊಸ ನಾಯಕತ್ವದ ಕುರಿತು ಅನಗತ್ಯ ಚರ್ಚೆ ನಡೆಸುವುದು ಪಕ್ಷಕ್ಕೆ ಒಳ್ಳೆಯದಲ್ಲ ಎಂದೂ ಬೈರತಿ ಸುರೇಶ್ ಹೇಳಿದ್ದಾರೆ. .


