ತಿರುವನಂತಪುರಂ: ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಕೇರಳದ ರಾಜಧಾನಿ ತಿರುವನಂತಪುರಂ ಪಾಲಿಕೆ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದೆ.
ಕೇರಳದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎನ್ ಡಿಎ ಪಕ್ಷದ ಅಭ್ಯರ್ಥಿಗಳು ತಿರುವನಂಪುರಂ ಪಾಲಿಕೆಯ 101 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 50 ಸ್ಥಾನಗಳಲ್ಲಿ ಗೆದ್ದು ಇತಿಹಾಸ ಬರೆದಿದೆ.
ಸಿಪಿಎಂ ನೇತೃತ್ವದ ಲೆಫ್ಟ್ ಡೆಮಾಕ್ರೆಟಿಕ್ ಫ್ರಂಟ್ (ಎಲ್ ಡಿಎಫ್) 29 ಸ್ಥಾನಗಳಿಗೆ ಕುಸಿಯುವ ಮೂಲಕ 45 ವರ್ಷಗಳ ಆಡಳಿತ ಕೊನೆಗೊಂಡಿದೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್ (ಯುಡಿಎಫ್) 19 ಸ್ಥಾನದೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ. ಪಕ್ಷೇತರ ಅಭ್ಯರ್ಥಿಗಳು 2 ಸ್ಥಾನ ಗೆದ್ದಿದ್ದಾರೆ.
ವಿಶೇಷ ಅಂದರೆ ತಿರುವನಂತಪುರಂ ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದು, ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರ ಕ್ಷೇತ್ರವಾಗಿದೆ. ಇತ್ತೀಚೆಗೆ ಶಶಿ ತರೂರ್ ಬಿಜೆಪಿ ಪರ ಒಲವು ತೋರುತ್ತಿರುವುದು ಬಿಜೆಪಿಗೆ ವರವಾಗಿ ಪರಿಮಣಿಸಿದೆ ಎಂದು ವಿಶ್ಲೇಷಿಸಲಾಗಿದೆ.
ತ್ರಿಪುನಿತುರದಲ್ಲಿ ಮುನ್ನಡೆ
ಇದೇ ವೇಳೆ ಎರ್ನಾಕುಳಂ ಜಿಲ್ಲೆಯ ತ್ರಿಪುನಿತುರ ಮುನ್ಸಿಪಾಲ್ ಚುನಾವಣೆಯಲ್ಲಿ 53 ಸ್ಥಾನಗಳ ಪೈಕಿ 21 ಸ್ಥಾನಗಳಲ್ಲಿ ಜಯ ಸಾಧಿಸುವ ಮೂಲಕ ಬಹುಮತದ ಹೊಸ್ತಿಲಲ್ಲಿ ಎಡವಿತು. ಎಲ್ ಡಿಎಫ್ 20 ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ 12 ಸ್ಥಾನಗಳಲ್ಲಿ ಗೆದ್ದುಕೊಂಡಿವೆ.


