Tuesday, December 09, 2025
Menu

ಬಿಜೆಪಿ ಪ್ರತಿಭಟನೆ ಮಾಡಬೇಕಿರುವುದು ಕೇಂದ್ರ ಸರ್ಕಾರದ ವಿರುದ್ಧ: ಡಿಕೆ ಶಿವಕುಮಾರ್

“ರಾಜ್ಯಕ್ಕೆ ಅನ್ಯಾಯ ಆಗಿರುವುದು ಕೇಂದ್ರ ಸರ್ಕಾರದಿಂದ. ಹೀಗಾಗಿ ಬಿಜೆಪಿಯು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕು” ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು. ರಾಜ್ಯ ಸರ್ಕಾರ ವಿರುದ್ಧ ಬಿಜೆಪಿಯ ಪ್ರತಿಭಟನೆ ಬಗ್ಗೆ ಕೇಳಿದಾಗ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಬೆಳಗಾವಿ ಸರ್ಕಿಟ್ ಹೌಸ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್  ಉತ್ತರಿಸಿದರು.  ರಾಜ್ಯ ಸರ್ಕಾರ ವಿರುದ್ಧ ಬಿಜೆಪಿಯ ಪ್ರತಿಭಟನೆ ಬಗ್ಗೆ ಕೇಳಿದಾಗ “ಕಬ್ಬು, ಮೆಕ್ಕೆಜೋಳ, ಸಕ್ಕರೆ, ಎಥನಾಲ್ ಸೇರಿದಂತೆ ಪ್ರತಿ ವಿಚಾರದಲ್ಲಿ ಅನ್ಯಾಯ ಆಗಿರುವುದು ಕೇಂದ್ರ ಸರ್ಕಾರದಿಂದ. ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ನೀಡಬೇಕಾದ ಅನುದಾನ ಸರಿಯಾಗಿ ಸಿಗುತ್ತಿಲ್ಲ. ರೈತರಿಗೆ ಸಹಾಯ ಮಾಡಲು ಮಹದಾಯಿ ಯೋಜನೆ ಬಗ್ಗೆ ತೀರ್ಮಾನ ಮಾಡಲು ಇವರೆಗೂ ಕೇಂದ್ರ ಸರ್ಕಾರಕ್ಕೆ ಸಾಧ್ಯ ವಾಗಿಲ್ಲ. ಮೇಕೆದಾಟು ವಿಚಾರದಲ್ಲಿ ನಮ್ಮ ಹೋರಾಟದಿಂದ ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಕ್ಕಿದ್ದು, ಒಂದೇ ದಿನದಲ್ಲಿ ಅನುಮತಿ ಕೊಡಿಸುತ್ತೇವೆ ಎಂದು ಹೇಳಿದ್ದವರು ಇನ್ನೂ ಕೊಡಿಸಿಲ್ಲ. ಭದ್ರ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ ಘೋಷಿಸಿದ ₹5,400 ಹಣವನ್ನು ಇದುವರೆಗೂ ಕೊಟ್ಟಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಭೂ ಸಂತ್ರಸ್ತ ರೈತರಿಗೆ 76 ಸಾವಿರ ಕೋಟಿ ಪರಿಹಾರ ನೀಡಲು ನಮ್ಮ ಸರ್ಕಾರ ತೀರ್ಮಾನಿಸಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು” ಎಂದು ಕಿಡಿಕಾರಿದರು.

“ಬಿಜೆಪಿಯ ಯಾವೊಬ್ಬ ಸಂಸದರು ಕೇಂದ್ರ ಸರ್ಕಾರದ ಜೊತೆ ಈ ವಿಚಾರವಾಗಿ ಮಾತನಾಡಿಲ್ಲ. ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ” ಎಂದರು. ಸರ್ವಪಕ್ಷ ನಿಯೋಗ ಭೇಟಿ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಡಿ.8ರಂದು ಸಭೆ ಮಾಡಲು ನಾವು ನಿರ್ಧರಿಸಿದ್ದೆವು. ಆದರೆ ಅವರು ಸಮಯದ ಇಕ್ಕಟ್ಟಿದೆ ಎಂದು ನಮಗೆ ಪತ್ರ ಬರೆದರು. ಹೀಗಾಗಿ ಅವರು ನಾವು ಅವರಿಗೆ ಸಮಯ ನಿಗದಿ ಮಾಡಲು ಹೇಳಿದ್ದು, ಅವರು ಹೇಳಿದ ದಿನ ಸಭೆ ಮಾಡಲು ಸಿದ್ಧವಿದ್ದೇವೆ” ಎಂದು ಸ್ಪಷ್ಟಪಡಿಸಿದರು.

ನನ್ನ ಹಾಗೂ ಸಿಎಂ ನಡುವೆ ಭಿನ್ನಾಭಿಪ್ರಾಯವಿಲ್ಲ

ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಎಂಬ ಯತೀಂದ್ರ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನನ್ನ ಹಾಗೂ ಸಿಎಂ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಮ್ಮಲ್ಲಿ ಈ ಹಿಂದೆಯೂ ಗೊಂದಲವಿಲ್ಲ, ಈಗಲೂ ಇಲ್ಲ, ಮುಂದೆಯೂ ಇಲ್ಲ. ಅವರು ಯಾವ ರೀತಿ ಹೇಳಿದ್ದಾರೆ ನನಗೆ ಗೊತ್ತಿಲ್ಲ. ನಾನು ಅವರ ಜೊತೆ ಮಾತನಾಡುವೆ” ಎಂದು ತಿಳಿಸಿದರು.

ಹೈಕಮಾಂಡ್ ನಿಮ್ಮನ್ನು ಯಾವಾಗ ಕರೆಯಬಹುದು ಎಂದು ಕೇಳಿದಾಗ, “ನನಗೆ ಗೊತ್ತಿಲ್ಲ. ಅವರು ನನ್ನ ಜೊತೆ ಚರ್ಚೆ ಮಾಡಿರುವ ವಿಚಾರವನ್ನು ನಿಮ್ಮ (ಮಾಧ್ಯಮಗಳ) ಮುಂದೆ ಬಹಿರಂಗಪಡಿಸುವುದಿಲ್ಲ” ಎಂದು  ಉತ್ತರಿಸಿದರು.

Related Posts

Leave a Reply

Your email address will not be published. Required fields are marked *