Menu

ರಾಜ್ಯಕ್ಕೆ ಮತ್ತೆ ಮತ್ತೆ ತೆರಿಗೆ ಹಂಚಿಕೆ ಅನ್ಯಾಯ: ಬಿಜೆಪಿ ನಾಯಕರ ಮೌನಕ್ಕೆ ಸಿಎಂ ಆಕ್ರೋಶ

ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಮತ್ತೆ ಮತ್ತೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಬೇಕಾದ ಬಿಜೆಪಿ ನಾಯಕರು ದೆಹಲಿ ಗುಲಾಮರಾಗಿದ್ದಾರೆ.
ಜನಪ್ರತಿನಿಧಿಗಳು ದಾರಿ ತಪ್ಪಿದಾಗ ಸರಿದಾರಿಗೆ ತರುವ ಹೊಣೆ ಜನರದ್ದಾಗಿದೆ.  ರಾಜ್ಯವನ್ನೇ ಪ್ರೀತಿಸದವರು ದೇಶವನ್ನು ಹೇಗೆ ಪ್ರೀತಿಸಲು ಸಾಧ‍್ಯ ಎನ್ನುವುದನ್ನು ಬಿಜೆಪಿಯವರು ಹೇಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಕರ್ನಾಟಕಕ್ಕೆ ನಿರಂತರವಾಗಿ ಮಾಡುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಬೇಕಿದ್ದ ರಾಜ್ಯದ ಬಿಜೆಪಿ ನಾಯಕರು ಮತ್ತು ಸಂಸದರು ಕೇಂದ್ರ ಸರ್ಕಾರವನ್ನು ಸಮರ್ಥಿಸುತ್ತಿರುವುದು ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯ ಮತ್ತು ಅವಮಾನ ಎಂದರು. ನಾವು ಕೇಂದ್ರದ ಬೊಕ್ಕಸಕ್ಕೆ  ನೀಡುತ್ತಿರುವ ಒಂದು ರೂಪಾಯಿಗೆ  13 ಪೈಸೆಯಷ್ಟು ಮಾತ್ರ ವಾಪಸು ನೀಡುತ್ತಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಇತ್ತೀಚೆಗೆ ರಾಜ್ಯಗಳಿಗೆ ತೆರಿಗೆ ಮತ್ತು ಸುಂಕದ ಪಾಲಿನ ರೂಪದಲ್ಲಿ ಒಟ್ಟು 1,73,030 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಇದರಲ್ಲಿ  ರಾಜ್ಯಕ್ಕೆ ನೀಡಿರುವ ಪಾಲು  6,310 ಕೋಟಿ ರೂಪಾಯಿ.  ದೇಶದ ಜಿಡಿಪಿಯಲ್ಲಿ ಕನ್ನಡಿಗರ ಪಾಲು  ಶೇಕಡಾ 8.4 ಆಗಿದೆ.  ಹೆಚ್ಚು ಜಿಎಸ್‌ಟಿ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ‍್ಥಾನದಲ್ಲಿದೆ. ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹ ಶೇಕಡಾ 17ರಷ್ಟು ಹೆಚ್ಚಾಗುತ್ತಿದೆ. ಹೀಗಿದ್ದರೂ ತೆರಿಗೆ ಹಂಚಿಕೆಯಲ್ಲಿ ನಮ್ಮ ಪಾಲು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡುತ್ತಾ ಬರಲಾಗುತ್ತಿದೆ. ಈ ಅನ್ಯಾಯ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಕಳೆದ ಆರು ವರ್ಷಗಳ ಅವಧಿಯಲ್ಲಿ ಬಜೆಟ್ ಗಾತ್ರ ದುಪ್ಪಟ್ಟಾಗಿದ್ದರೂ ಕರ್ನಾಟಕದ ತೆರಿಗೆ ಪಾಲು 15,299 ರೂಪಾಯಿಗಳಷ್ಟು ಮಾತ್ರ ಹೆಚ್ಚಾಗಿದೆ. ಈ ತೆರಿಗೆ ಪಾಲು ಕನಿಷ್ಠ ಒಂದು ಲಕ್ಷ ಕೋಟಿ ರೂಪಾಯಿಗಳಷ್ಟಾದರೂ ಆಗಬೇಕಿತ್ತಲ್ಲವೇ, ರಾಜ್ಯ  ಪ್ರತಿವರ್ಷ ನಾಲ್ಕುವರೆ ಲಕ್ಷ ಕೋಟಿ ರೂಪಾಯಿಗಳನ್ನು ಕೇಂದ್ರದ ಬೊಕ್ಕಸಕ್ಕೆ ನೀಡುತ್ತಿದೆ. ನಾವು ನೀಡುತ್ತಿರುವ ಒಂದು ರೂಪಾಯಿಗೆ  ಕೇಂದ್ರ ಸರ್ಕಾರ ತೆರಿಗೆ ಪಾಲಿನ ರೂಪದಲ್ಲಿ  13 ಪೈಸೆಯಷ್ಟು ಮಾತ್ರ ವಾಪಸು ನೀಡುತ್ತಿದೆ ಎಂದು ಮುಖ್ಯಮಂತ್ರಿ ವಿವರಿಸಿದ್ದಾರೆ.

ರಾಜ್ಯದಿಂದ ಆರಿಸಿಹೋಗಿರುವ ಬಿಜೆಪಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಎದುರು ನಿಂತು ನ್ಯಾಯ ಕೇಳುವ ಕನಿಷ್ಠ ಧೈರ್ಯವೂ ಇಲ್ಲದೆ ದೆಹಲಿ ಸರ್ಕಾರದ ಗುಲಾಮರಾಗಿದ್ದಾರೆ. ಕೇಂದ್ರ ಸರ್ಕಾರ ಮತ್ತು ಬಿಜೆಪಿಯ ಮೂಗ ನಾಯಕರ ವಿರುದ್ಧ ಕನ್ನಡಿಗರೆಲ್ಲರೂ ಜಾತಿ, ಧರ್ಮ, ಪಕ್ಷ ಪಂಥಗಳನ್ನು ಮೀರಿ ದನಿ ಎತ್ತಬೇಕಾಗಿದೆ. ಕರ್ನಾಟಕವನ್ನು ಅನ್ಯಾಯ ಮತ್ತು ಅವಮಾನದಿಂದ ರಕ್ಷಿಸಬೇಕಾಗಿದೆ ಎಂದು ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *