ಬದುಕಿದ್ದಾಗ ಮಮತೆ, ಅಕ್ಕರೆಯಿಂದ ಮಕ್ಕಳನ್ನು ಪೋಷಿಸಿದ ತಾಯಿ, ಇಹಲೋಕ ತ್ಯಜಿಸಿದ ಬಳಿಕವೂ ಅನ್ಯರ ಬದುಕಿಗೆ ಬೆಳಕಾಗುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಹೌದು, ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರ ತಾಯಿ ಸುಶೀಲಮ್ಮ ಅವರು ಇಹಲೋಕ ತ್ಯಜಿಸಿದ್ದು, ಅವರ ನೇತ್ರ ಹಾಗೂ ದೇಹ ದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಸೆಪ್ಟೆಂಬರ್ 23ರ ಬೆಳಿಗ್ಗೆ ಸುರೇಶ್ ಕುಮಾರ್ ಅವರ ತಾಯಿ ಸುಶೀಲಮ್ಮ ವಯೋಸಹಜ ಕಾಯಿಲೆಯಿಂದ ಇಹಲೋಕ ತ್ಯಜಿಸಿದರು. ಈ ದುಃಖದ ಸಂಗತಿಯನ್ನು ಸ್ವತಃ ಸುರೇಶ್ ಕುಮಾರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು.
‘ನನ್ನನ್ನು ಹೊತ್ತು, ಹೆತ್ತು ಸಾಕಿ, ತಿದ್ದಿ ತೀಡಿ ಬೆಳೆಸಿದ ನನ್ನಮ್ಮ, ಎಲ್ಲರ ಸುಶೀಲಮ್ಮ ಟೀಚರ್ ಇನ್ನಿಲ್ಲ. ಬೆಳಗಿನ ಜಾವ ನನ್ನನ್ನು ಬಿಟ್ಟು ಹೊರಟು ಬಿಟ್ಟರು’ ಎಂದು ಸುರೇಶ್ ಕುಮಾರ್ ಅವರು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದರು.
ಇದೀಗ ಸುಶೀಲಮ್ಮ ಅವರ ಎರಡು ಕಣ್ಣುಗಳನ್ನು ನಾರಾಯಣ ನೇತ್ರಾಯಲಕ್ಕೆ ದಾನ ಮಾಡಿದ್ದಾರೆ. ರಾಮಯ್ಯ ಮೆಡಿಕಲ್ ಕಾಲೇಜಿಗೆ ದೇಹವನ್ನು ದಾನವಾಗಿ ನೀಡಲಾಗಿದೆ.
‘ಮೊನ್ನೆ ನಮ್ಮನ್ನು ಬಿಟ್ಟು ತೆರಳಿದ ನನ್ನಮ್ಮ, ಸುಶೀಲಮ್ಮ ಟೀಚರ್ ಹೆಸರಿಗೆ ಸಿಕ್ಕ ಕೊನೆಯ CERTIFICATES. (ನೇತ್ರದಾನ, ದೇಹದಾನ) ಎಂದು ಸುರೇಶ್ ಕುಮಾರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಅಂಗಾಂಗ ದಾನದಂತೆ ದೇಹದಾನವೂ ಮನುಷ್ಯ ಸತ್ತ ಬಳಿಕ ಇತರರಿಗೆ ಉಪಯೋಗವಾಗುವ ಮಹತ್ತರ ಸೇವೆಯಾಗುತ್ತದೆ. ದೇಹದಾನ ಪ್ರಕ್ರಿಯೆ ಸರಳವಾಗಿದ್ದು, ವೈದ್ಯಕೀಯ ಅಧ್ಯಯನಕ್ಕೂ, ಸಮಾಜದ ಕಲ್ಯಾಣಕ್ಕೂ ಬಹುಮುಖ ಅನುಕೂಲ ತರುತ್ತದೆ. ಹಾಗಾದರೆ ದೇಹದಾನ ಮಾಡುವುದು ಹೇಗೆ? ಪ್ರಕ್ರಿಯೆಗಳೇನು? ದೇಹದಾನದಿಂದ ಆಗುವ ಅನುಕೂಲವೇನು? ಇಲ್ಲಿದೆ ಸಂಪೂರ್ಣ ಮಾಹಿತಿ
ದೇಹದಾನಕ್ಕೆ ಅರ್ಜಿ ಸಲ್ಲಿಸುವ ವಿಧಾನ
- ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ನಡೆಸುವ ಅರಿವು ಕಾರ್ಯಕ್ರಮಗಳು ಅಥವಾ ಜಾಹೀರಾತುಗಳ ಮೂಲಕ ಸಂಸ್ಥೆಯನ್ನು ಸಂಪರ್ಕಿಸಬೇಕು.
- ದೇಹದಾನದ ಅರ್ಜಿ ಫಾರಂ ಪಡೆದು ಅಗತ್ಯವಾದ ವೈಯಕ್ತಿಕ ಮಾಹಿತಿ (ಮನೆಯ ವಿಳಾಸ, ಫೋನ್ ನಂಬರ್, ಸಂಬಂಧಿಕರ ದೂರವಾಣಿ ಸಂಖ್ಯೆ) ಭರ್ತಿ ಮಾಡಬೇಕು.
- ದೇಹದಲ್ಲಿ ಇರುವ ಮಚ್ಚೆ, ಗಾಯದ ಗುರುತು ಇತ್ಯಾದಿ ವಿವರಗಳನ್ನು ನಮೂದಿಸಿ, ಭಾವಚಿತ್ರವನ್ನು ಅಂಟಿಸಬೇಕು.
- ವಿಳಾಸದ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್ ಪ್ರತಿಯನ್ನು ಸಲ್ಲಿಸಬೇಕು.
- “ಸ್ವ-ಇಚ್ಛೆಯಿಂದ ದೇಹದಾನ ಮಾಡುತ್ತೇನೆ” ಎಂಬ ಹೇಳಿಕೆಯನ್ನು ಬರೆದು ಸಹಿ ಹಾಕಬೇಕು.
- ಸಂಬಂಧಿಕರಲ್ಲಿ ಇಬ್ಬರು ಸಾಕ್ಷಿಗಳ ಸಹಿ ಅಗತ್ಯ.
- ಅರ್ಜಿಯನ್ನು ವೈದ್ಯಕೀಯ ಶಿಕ್ಷಣ ಸಂಶೋಧನಾ ಸಂಸ್ಥೆಗೆ ಸಲ್ಲಿಸಿದ ಬಳಿಕ ಪರಿಶೀಲನೆ ಮಾಡಿ, ಸಂಸ್ಥೆ ಸ್ವೀಕೃತಿ ಪತ್ರ ನೀಡುತ್ತದೆ.
- ಸ್ವೀಕೃತಿ ಪತ್ರದಲ್ಲಿ ದೇಹದಾನ ಸಂಬಂಧಿತ ಸಲಹೆಗಳು ಮತ್ತು ಮರಣಾನಂತರದ ಕ್ರಮಗಳ ವಿವರ ನೀಡಲಾಗುತ್ತದೆ.
- ಮರಣ ಸಂಭವಿಸಿದ 6 ಗಂಟೆಗಳೊಳಗೆ ಮಾತ್ರ ದೇಹವನ್ನು (ಮೃತದೇಹ) ಸ್ವೀಕರಿಸಲಾಗುವುದು.
- 24 ಗಂಟೆಗಳ ನಂತರ ದೇಹವನ್ನು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗಾಗಿ ಬಳಸಲು ಅಸಾಧ್ಯವಾಗುತ್ತದೆ.
- ಹೃದಯ, ಕಣ್ಣು, ಮೂತ್ರಪಿಂಡ ಇತ್ಯಾದಿ ಅಂಗಾಂಗಗಳನ್ನು ತೆಗೆದುಹಾಕಿದ ದೇಹವನ್ನು ಸ್ವೀಕರಿಸಲಾಗುವುದಿಲ್ಲ.
ಮರಣಾನಂತರ ದೇಹವನ್ನು ಒಪ್ಪಿಸುವ ಪ್ರಕ್ರಿಯೆ
- ದೇಹದಾನ ಮಾಡಲು ಇಚ್ಛಿಸಿರುವವರು ತಮ್ಮ ಸಂಬಂಧಿಕರಿಗೆ ಈ ಕುರಿತು ಮೊದಲೇ ತಿಳಿಸಿರಬೇಕು.
- ಮರಣ ಸಂಭವಿಸಿದ ನಂತರ ಸಂಬಂಧಿಕರು ದೇಹದಾನ ಸ್ವೀಕರಿಸುವ ಸಂಸ್ಥೆಗೆ ತಕ್ಷಣ ತಿಳಿಸಬೇಕು.
- ಮೃತ ವ್ಯಕ್ತಿಯ ಆಧಾರ್ ಕಾರ್ಡ್ ಹಾಗೂ ಮರಣ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
- ಸಂಸ್ಥೆ ಆಂಬ್ಯುಲೆನ್ಸ್ ಕಳುಹಿಸಿ ದೇಹವನ್ನು ತನ್ನ ವಿಭಾಗಕ್ಕೆ ತರಿಸಿಕೊಳ್ಳುತ್ತದೆ.
- ದೇಹಕ್ಕೆ ಯಾವುದೇ ವಾಸನೆ ಬರದಂತೆ ಇಂಜೆಕ್ಷನ್ ಮೂಲಕ ಸಂರಕ್ಷಣೆ ಮಾಡಲಾಗುತ್ತದೆ.
- ಸಹಜ ಸಾವು ಸಂಭವಿಸಿದರೆ ಮಾತ್ರ ದೇಹವನ್ನು ದಾನವಾಗಿ ಸ್ವೀಕರಿಸಲಾಗುತ್ತದೆ.
- ಅಸಹಜ ಸಾವು (ಅಪಘಾತ, ಕೆಲ ರೋಗಗಳಿಂದಾದ ಮರಣ) ಆಗಿದ್ದರೆ ದೇಹವನ್ನು ಸ್ವೀಕರಿಸಲಾಗುವುದಿಲ್ಲ.