ಅನ್ನಭಾಗ್ಯ ಕಾಂಗ್ರೆಸ್ಸಿಗರ ಕಿಸೆಯಿಂದ ಬಂದ ಭಾಗ್ಯವಲ್ಲ. ಪ್ರಧಾನಿ ನರೇಂದ್ರ ಮೋದಿಯವರು ‘ಹಸಿವು ಮುಕ್ತ ಭಾರತ’ಕ್ಕಾಗಿ ತೊಟ್ಟ ಮಹಾ ಸಂಕಲ್ಪದ ಫಲವಾಗಿ ಗರೀಬ್ ಕಲ್ಯಾಣ್ ಯೋಜನೆಯ ಮೂಲಕ ದೇಶದ ಉದ್ದಗಲಕ್ಕೂ ಬಡವರಿಗೆ ತಲುಪಿದ ‘ಸ್ವಾಭಿಮಾನದ ಭಾಗ್ಯ’, ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ನಿಮ್ಮ ಕಲ್ಪನೆಯಲ್ಲಿ “ಅನ್ನಭಾಗ್ಯ ಜನರಿಗೆ ನೀಡುವ ಭಿಕ್ಷೆ ಎಂದು ಭಾವಿಸಿದಂತಿದೆ, ಅದು ಭಿಕ್ಷೆಯಲ್ಲ ಜನರ ಹಕ್ಕು” ಎಂಬ ಪರಿಜ್ಞಾನ ನಿಮಗಿರಲಿ, ಈ ಹಕ್ಕು ಪಡೆಯಲು ನಿಮ್ಮ ಮನೆಯ ಕೆಲಸಗಾರನಿಂದಿಡಿದು ದೇಶದ ಕಟ್ಟ ಕಡೆಯ ಪ್ರಜೆಗೂ ದಕ್ಕುವ ಸಂವಿಧಾನದ ಸೌಭಾಗ್ಯ. ತ್ರಿವಿಧ ದಾಸೋಹದ ಈ ನಾಡಿನಲ್ಲಿ ಅನ್ನಭಾಗ್ಯದ ಹೆಸರಿನಲ್ಲಿ ಬಡವರನ್ನು ಹಂಗಿಸುವ ಮೂಲಕ ಚಾಲನೆ ವೃತ್ತಿ ಆರಿಸಿಕೊಂಡಿರುವ ಶ್ರಮಿಕ ಚಾಲಕ ಸಮೂಹವನ್ನು ನೀವು ಅವಮಾನಿಸಿದ್ದೀರಿ.”
“ರಾಜ್ಯದಲ್ಲಿ ಮಕ್ಕಳು ‘ಅಕ್ಷರಭಾಗ್ಯ’ ಪಡೆಯುವಲ್ಲಿ ನಿತ್ಯ ಬವಣೆ ಅನುಭವಿಸುತ್ತಿದ್ದಾರೆ, ಮೊದಲು ಅದರತ್ತ ಗಮನ ಕೊಡಿ, ಸಾವಿರಾರು ಸರ್ಕಾರಿ ಶಾಲೆಗಳು ಮೂಲಭೂತ ಸೌಲಭ್ಯಗಳಿಲ್ಲದೇ ನಲುಗುತ್ತಿವೆ, ಕಟ್ಟಡಗಳ ಮೇಲ್ಛಾವಣಿ ಕುಸಿದು ಅವಘಡಗಳು ಸಂಭವಿಸುತ್ತಿವೆ, ಇಂದಿಗೂ ಅದೆಷ್ಟೋ ಶಾಲೆಗಳಲ್ಲಿ ಶೌಚಾಲಯಗಳಿಲ್ಲದೆ ಮಕ್ಕಳು ಮುಜುಗರ ಅನುಭವಿಸುತ್ತಿದ್ದಾರೆ,” ಎಂದಿದ್ದಾರೆ.
“ಮೊದಲು ಊರು ಸುತ್ತಿಬನ್ನಿ, ಹಳ್ಳಿಗಾಡಿನ ಶಾಲೆಗಳ ಸ್ಥಿತಿ ನೋಡಿ ಬನ್ನಿ, ಅಗತ್ಯ ಶಿಕ್ಷಕರಿಲ್ಲದೇ ಮಕ್ಕಳು ಅಕ್ಷರ ವಂಚಿತರಾಗುತ್ತಿರುವ ಬಗ್ಗೆ ನಿತ್ಯ ವರದಿಯಾಗುತ್ತಿದೆ ‘ವಿದ್ಯಾಭಾಗ್ಯ’ಕ್ಕೆ ಆಗುತ್ತಿರುವ ಕಂಟಕವನ್ನು ತಪ್ಪಿಸುವ ಸಾಮರ್ಥ್ಯವಿಲ್ಲದ ನೀವು ‘ಅನ್ನ ಭಾಗ್ಯ’ದ ಹೆಸರಿನಲ್ಲಿ ಬಡವರನ್ನು ಅವಮಾನಿಸಲು ಲಜ್ಜೆಗೇಡಿತನದ ವರ್ತನೆ ಪ್ರದರ್ಶಿಸಿದ್ದೀರಿ. ಶಿಕ್ಷಣ ಸಚಿವ ಸ್ಥಾನದ ಸಜ್ಜನಿಕೆ ಬಿಟ್ಟು ಮಾತನಾಡುವ ನಿಮ್ಮಿಂದ “ಶಿಕ್ಷಣ ಇಲಾಖೆಯನ್ನು ದೇವರೇ ಕಾಪಾಡಬೇಕಾದ ಸ್ಥಿತಿ ಬಂದೊದಗಿರುವುದು ಈ ನಾಡಿನ ದೌರ್ಭಾಗ್ಯವಾಗಿದೆ,” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ನಾಯಕ ವಿಜಯೇಂದ್ರ ಮನೆಯ ಕಾರ್ ಡ್ರೈವರ್‌ಗೆ ಸಿಎಂ ಸಿದ್ದರಾಮಯ್ಯ ಸರ್ಕಾರದ ಅನ್ನಭಾಗ್ಯದಿಂದ ಅನುಕೂಲ ಆಗುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದರು.
ಬಿವೈ ವಿಜಯೇಂದ್ರ ಅವರು ಜಿಎಸ್‌ಟಿ ಇಳಿಗೆ ಹಿನ್ನಲೆಯಲ್ಲಿ ಶಿವಮೊಗ್ಗದಲ್ಲಿ ಸಂಭ್ರಮಾಚರಣೆ ಮಾಡುತ್ತಾ ಇದ್ದಾರೆ. ಅವರಿಗೆ ನಾಚಿಕೆ ಆಗಬೇಕು. ಅವರ ಮನೆ ಡ್ರೈವರ್‌ಗೆ ಸಿದ್ದರಾಮಯ್ಯ ಸರ್ಕಾರದ ಅನ್ನಭಾಗ್ಯ ಸಹಕಾರ ಆಗ್ತಿದೆ. ರಾಜ್ಯದ ಎಂಪಿಗಳು ಹಣ ಕೊಡಬೇಡಿ ಎಂದು ತೀವ್ರ ವಾಗ್ದಾಳಿ ನಡೆಸಿದ್ದರು.