ಶಾಸಕರ ಖರೀದಿ ಬಿಜೆಪಿಯವರ ಟ್ರಿಕ್ಸ್, ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿಯವರು ಎಷ್ಟು ಶಾಸಕರನ್ನು ಖರೀದಿಸಿದ್ದಾರೆಂದು ಹೇಳಲಿ. ದೇಶದ ವಿಷಯಗಳ ಬಗ್ಗೆ ಕೇಳಿದರೆ ಅವರು ಮಾತನಾಡುವುದಿಲ್ಲ. ಕೇಂದ್ರ ಸಚಿವರು ಕೇವಲ ರಾಜ್ಯವನ್ನು ಟೀಕಿಸಿ ಹೋಗುತ್ತಾರೆ. ಬಿಜೆಪಿಯವರಿಗೆ ಲೆಕ್ಕ ಪಕ್ಕ ಇಲ್ಲ, ಕೇವಲ ಮಾತಿನಲ್ಲಿ ಕಾಲ ಕಳೆಯುತ್ತಾರೆ ಸಚಿವ ಸಂತೋಷ ಲಾಡ್ ಟೀಕಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಶಾಸಕರ ಖರೀದಿ ಆರೋಪದ ವಿಚಾರಕ್ಕೆ ಹೀಗೆ ಪ್ರತಿಕ್ರಿಯಿಸಿದ್ದಾರೆ. ನರೇಗಾ ಯೋಜನೆಯ ಕುರಿತಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, ನರೇಗಾದಲ್ಲಿ ಎಷ್ಟು ಕೆಲಸ ವಾಗಿದೆ, ಎಷ್ಟು ಹಣ ಬಿಡುಗಡೆಯಾಗಿದೆ ಎಂದು ಬಿಜೆಪಿಯವರು ಹೇಳಲಿ. ಅವರ ಉದ್ದೇಶವೇ ನರೇಗಾ ಯೋಜನೆಯನ್ನು ಮುಗಿಸುವುದು. ಯಾರು ಸಿಎಂ ಆಗುತ್ತಾರೆ, ಯಾರು ಬಿಡುತ್ತಾರೆ ಎಂಬ ಚರ್ಚೆ ಅನಗತ್ಯ. ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಸಂತೋಷ ಲಾಡ್ ಸ್ಪಷ್ಟಪಡಿಸಿದರು.
ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮದಲ್ಲಿ ಇಬ್ಬರು ರೈತರು, ರವಿರಾಜ್ ಮತ್ತು ಬಸನಗೌಡ, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿದ ಸಚಿವರು, ರೈತರು ಧೈರ್ಯವಾಗಿರಬೇಕು. ಆತ್ಮಹತ್ಯೆ ಒಂದೇ ಪರಿಹಾರವಲ್ಲ. ನಾನು ದೊಡ್ಡ ಕುಟುಂಬದಿಂದ ಬಂದವನಾಗಿದ್ದರೂ ಕಷ್ಟಗಳನ್ನು ಎದುರಿಸಿದ್ದೇನೆ. ರೈತರ ಕುಟುಂಬಕ್ಕೆ ಪರಿಹಾರ ನೀಡಲು ಮುಖ್ಯಮಂತ್ರಿಯವರ ಜೊತೆ ಚರ್ಚಿಸುತ್ತೇನೆ ಎಂದು ನೀಡಿದರು. ಬೆಳೆ ವಿಮೆಯಲ್ಲಿ ಯಾವುದೇ ಅನ್ಯಾಯವಾಗಿದ್ದರೆ, ತನಿಖೆಗೆ ಆದೇಶಿಸುವುದಾಗಿ ಹೇಳಿದರು.