ದೇಶದಾದ್ಯಂತ ನಡೆಯುತ್ತಿರುವ ಮತಗಳ್ಳತನ ಅಕ್ರಮದಲ್ಲಿ ಬಿಜೆಪಿ ಹಾಗೂ ಚುನಾವಣಾ ಆಯೋಗ ಜಂಟಿಯಾಗಿ ಶಾಮೀಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.
ಮತಗಳ್ಳತನದ ವಿರುದ್ಧ ಶನಿವಾರ ತಮ್ಮ ಗೃಹ ಕಚೇರಿಯಿಂದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಚುನಾವಣಾ ಆಯೋಗ ಬಿಜೆಪಿಯ ಅಂಗಸಂಸ್ಥೆಯಂತೆ, ಬಿಜೆಪಿಯ ಪಕ್ಷಪಾತಿಯ ರೀತಿ ಕೆಲಸ ಮಾಡುತ್ತಿದೆ. ಪರಿಣಾಮ ಇಡೀ ದೇಶದ ಚುನಾವಣಾ ಪ್ರಕ್ರಿಯೆಯೇ ಬುಡಮೇಲಾಗಿದೆ. ಚುನಾವಣಾ ವ್ಯವಸ್ಥೆಯಲ್ಲೇ ಅಕ್ರಮ ಎಸಗಿಬಿಟ್ಟರೆ ಬಿಜೆಪಿಯ ಗೆಲುವು ಸುಲಭ. ಹೀಗಾಗಿ ಚುನಾವಣಾ ಆಯೋಗ ಮತ್ತು ಬಿಜೆಪಿ ಜಂಟಿಯಾಗಿಯೇ ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ” ಎಂದು ಕಿಡಿಕಾರಿದರು.
“ದೇಶದ ವ್ಯವಸ್ಥೆಯಲ್ಲಿ ಚುನಾವಣಾ ಆಯೋಗಕ್ಕೆ ಮಹತ್ತರವಾದ ಜವಾಬ್ದಾರಿ ಇದೆ. ಮತದಾರರ ಪಟ್ಟಿ ನಿರ್ವಹಣೆಯಲ್ಲಿ ಯಾವುದೇ ಅಕ್ರಮವಾಗದಂತೆ ನೋಡಿಕೊಳ್ಳುವುದು ಈ ಆಯೋಗದ ಮೊದಲ ಕರ್ತವ್ಯ. ಆದರೆ, ಕಲಬುರಗಿಯ ಆಳಂದ ಕ್ಷೇತ್ರದಿಂದ ಬೆಂಗಳೂರಿನ ಮಹದೇವಪುರ ಕ್ಷೇತ್ರದ ವರೆಗೆ ಮತದಾರ ಪಟ್ಟಿಯಲ್ಲೇ ಚುನಾವಣಾ ಆಯೋಗ ಎಷ್ಟು ಅಕ್ರಮ ಎಸಗಿದೆ ಎಂಬ ವಿಚಾರ ಕಣ್ಣ ಮುಂದಿದೆ” ಎಂದು ವಿಷಾದಿಸಿದರು.
ಮಹದೇವಪುರದಲ್ಲಿ 35,000 ಬೋಗಸ್ ಮತಗಳನ್ನು ಪಟ್ಟಿಗೆ ಸೇರಿಸಿದ್ದಾರೆ ಎಂಬುದನ್ನು ಸಾಕ್ಷಿ ಸಮೇತ ನಿರೂಪಿಸಲಾಗಿದೆ. ಆಳಂದ ಕ್ಷೇತ್ರದಲ್ಲಿ 6,000 ನೈಜ ಮತದಾರರುಗಳ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಅಕ್ರಮದ ಮಾಹಿತಿ ಸೂಕ್ತ ಸಮಯಕ್ಕೆ ಶಾಸಕರಾದ ಬಿ.ಆರ್. ಪಾಟೀಲ್ ಅವರ ಗಮನಕ್ಕೆ ಬಂದ ಕಾರಣಕ್ಕೆ ಈ ಹಗರಣವನ್ನು ತಡೆಯಲಾಯಿತು. ಇಲ್ಲದಿದ್ದರೆ ಅಷ್ಟೂ ಮತಗಳು ಪಟ್ಟಿಯಿಂದ ತೆಗೆಯಲಾಗುತ್ತಿತ್ತು. ಇದು ಚುನಾವಣೆಯೊಂದರ ಫಲಿತಾಂಶದ ಮೇಲೂ ಪರಿಣಾಮ ಬೀರುತ್ತಿತ್ತು” ಎಂದು ಅಭಿಪ್ರಾಯಪಟ್ಟರು.
ಆಳಂದ ಕ್ಷೇತ್ರದಲ್ಲಿ ಸೈಬರ್ ಸೆಂಟರ್ ಬಳಸಿ ಹತ್ತಾರು ಫೋನ್ ನಂಬರ್ ಮೂಲಕ ಮತದಾರರ ಪಟ್ಟಿಯಿಂದ ಯಾರದ್ದೋ ಹೆಸರನ್ನು ತೆಗೆಯಲು ಇನ್ಯಾರದ್ದೋ ಹೆಸರಿನಿಂದ ಅರ್ಜಿ ಹಾಕಲಾಗಿದೆ. ಸುಮಾರು 70 ಕ್ಕೂ ಹೆಚ್ಚು ನಕಲಿ ಫೋನ್ ನಂಬರ್ ಗಳನ್ನು ಬಳಸಿರುವ ಮಾಹಿತಿ ಈಗಾಗಲೇ ತನಿಖೆಯಿಂದ ಹೊರಬಂದಿದೆ. ಈ ನಂಬರ್ಗಳು ಯಾರ ಹೆಸರಿನಲ್ಲಿ ಖರೀದಿಸಲಾಯಿತು? ಇವುಗಳ ಲೊಕೇಷನ್ ಎಲ್ಲಿದೆ? ಮತಗಳ್ಳತನಕ್ಕೆ ಬಳಸಿದ ಲ್ಯಾಪ್ಟಾಪ್ ಗಳ ಐಪಿ ವಿಳಾಸದ ಮಾಹಿತಿ ಸೇರಿದಂತೆ ತನಿಖೆಗೆ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನೂ ನೀಡಲು ಚುನಾವಣಾ ಆಯೋಗ ಹಿಂದೇಟು ಹಾಕುತ್ತಿರುವುದು ಏಕೆ? ಇವನ್ನೆಲ್ಲ ಗಮನಿಸಿದರೆ ಆಯೋಗ ಬಿಜೆಪಿಗಳ ಪಕ್ಷಪಾತಿಗಳಾಗಿದ್ದು, ಮತಗಳ್ಳತನ ಅಕ್ರಮದಲ್ಲಿ ಅವರೂ ಶಾಮೀಲಾಗಿರುವುದು ಸ್ಷಷ್ಟವಾಗುವುದಿಲ್ಲವೇ?” ಎಂದರು.
“ಚುನಾವಣಾ ಆಯೋಗ ಹಾಗೂ ಬಿಜೆಪಿ ಮುಂದೆ ನಿಂತು ಇಡೀ ಚುನಾವಣಾ ವ್ಯವಸ್ಥೆಯನ್ನೇ ಹಾಳು ಮಾಡಬೇಕು ಎಂದು ಪಣತೊಟ್ಟಂತಿದೆ. ಆದರೆ, ನಾವು ಇದಕ್ಕೆ ಆಸ್ಪದ ನೀಡಬಾರದು. ಚುನಾವಣಾ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಇಂದು ಮತಗಳ್ಳತನದ ವಿರುದ್ಧ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಮತದಾರರು ಈ ಅಕ್ರಮದ ಬಗ್ಗೆ ಎಚ್ಚರಾಗಬೇಕು. ಮುಂದಿನ ಚುನಾವಣೆಗಳಲ್ಲಿ ಜನತಾ ನ್ಯಾಯಾಲಯವೇ ಈ ಅಕ್ರಮಕ್ಕೆ ಸರಿಯಾದ ಉತ್ತರ ನೀಡಬೇಕು” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮನವಿ ಮಾಡಿದರು.


