ಸ್ಪೀಕರ್ ಕಾಂಗ್ರೆಸ್ ಪಕ್ಷದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ. ಶಾಸಕರ ಅಮಾನತು ಮತದಾರರಿಗೆ ಮಾಡಿದ ಅವಮಾನ. 18 ಶಾಸಕರ ಅಮಾನತನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು. ಅಮಾನತು ಹಿಂಪಡೆಯುವವರೆಗೆ ಬಿಜೆಪಿಯ ಶಾಸಕರು ಕಮಿಟಿ ಮೀಟಿಂಗ್‍ನಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯ 18 ಶಾಸಕರನ್ನು ಆರು ತಿಂಗಳ ಅವಧಿಗೆ ಅಮಾನತು ಮಾಡಿದ ಕ್ರಮವನ್ನು ಖಂಡಿಸಿ ಬೆಂಗಳೂರಿನ ವಿಧಾನ ಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಮಾಧ್ಯಮಗಳ ಜೊತೆ ಮಾತನಾಡಿದ ವಿಜಯೇಂದ್ರ, ಬಿಜೆಪಿಯ 18 ಶಾಸಕರ ಅಮಾನತು ಕ್ರಮ ಸಂವಿಧಾನಬಾಹಿರ ಎಂದು ಆಕ್ಷೇಪಿಸಿದರು.
ಜನಪ್ರತಿನಿಧಿಗಳನ್ನು 6 ತಿಂಗಳ ಕಾಲ ಅಮಾನತು ಮಾಡಿ ವಿಧಾನಸೌಧದ ಮೊಗಸಾಲೆಗೂ ಬರಬಾರದೆಂದು ಸ್ಪೀಕರ್ ಆದೇಶ ಮಾಡಿದ್ದಾರೆ. ಸ್ಪೀಕರ್ ಆಡಳಿತ ಪಕ್ಷದ ಕೈಗೊಂಬೆಯಾಗಿ ಹಾಗೂ ಮುಖ್ಯಮಂತ್ರಿಗಳನ್ನು ತೃಪ್ತಿಪಡಿಸಲು ಕಾನೂನು ಬಾಹಿರವಾಗಿ ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿ ಈ ರೀತಿ ಆದೇಶ ಮಾಡಿದ್ದಾರೆ ಎಂದು ಟೀಕಿಸಿದರು.
ಅಮಾನತು ಹಿಂಪಡೆಯುವುದಾಗಿ ಹೇಳಿಕೆ ನೀಡಿದ್ದ ಸ್ಪೀಕರ್ ಅವರು ಯಾತಕ್ಕೋಸ್ಕರ ಕಾಯುತ್ತಿದ್ದಾರೆ ಎಂದು ಪ್ರಶ್ನಿಸಿದರು. ತಮ್ಮ ನಿರ್ಣಯ ಸಂವಿಧಾನವಿರೋಧಿ ಎಂಬುದು ಸ್ಪೀಕರ್ ಅವರಿಗೂ ಅರ್ಥವಾಗಿದೆ. ಆದರೂ ಕೂಡ ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ಸ್ಪೀಕರ್ ಭಂಡತನ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಹಿಂದೆ ಸ್ಪೀಕರ್ ಸ್ಥಾನದಲ್ಲಿದ್ದ ಮಂಗಳೂರಿನ ಯೋಗೀಶ್ ಭಟ್ ಅವರನ್ನು ಎಳೆದಾಡಿ ಮೈಕಿನಿಂದ ಹೊಡೆದಿದ್ದರು. ಧರ್ಮೇಗೌಡರು ತಮ್ಮನ್ನು ಎಳೆದಾಡಿದ್ದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿದ್ದರಾಮಯ್ಯನವರು ಪೊಲೀಸ್ ಕಮೀಷನರ್ ಬ್ಯಾಡ್ಜ್ ಕಿತ್ತು ಹಾಕಿದ್ದರು ಎಂದು ಆಕ್ಷೇಪಿಸಿದರು. ಬಾಗಿಲನ್ನು ಕಾಲಿನಲ್ಲಿ ಒದ್ದಿದ್ದರು ಎಂದು ಗಮನ ಸೆಳೆದರು. ನಮ್ಮ ನ್ಯಾಯಯುತ ಹೋರಾಟ ಮುಂದುವರಿಯಲಿದೆ. ರಾಜ್ಯಪಾಲರನ್ನೂ ಭೇಟಿ ಮಾಡುತ್ತೇವೆ ಎಂದರು.
ನಮ್ಮ 18 ಶಾಸಕರನ್ನು ಅಮಾನತು ಮಾಡಿದ್ದೀರಿ. ಸದನ ನಡೆಯದೆ ಇರುವಾಗ ಸ್ಪೀಕರ್ ಪೀಠದಲ್ಲಿ ಕುಳಿತು ನಿಮ್ಮ ಸಂಬಂಧಿಗಳು, ಧರ್ಮಗುರುಗಳ ಜೊತೆ ಫೋಟೊ ತೆಗೆಸಿಕೊಳ್ಳುವುದು ನ್ಯಾಯವೇ, ಇದು ಪ್ರಜಾಪ್ರಭುತ್ವವೇ ಇಂಥ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.
ಮುಸ್ಲಿಮರಿಗೆ ಶೇ 4 ಮೀಸಲಾತಿ ಮಸೂದೆ ವಿಚಾರದಲ್ಲಿ ಸ್ಪೀಕರ್ ಕುತಂತ್ರ ಮಾಡಿದ್ದಾರೆ. ಸ್ಪೀಕರ್ ಹುದ್ದೆ ಧರ್ಮ- ಮತೀಯ- ಪಕ್ಷಾಧಾರಿತವಲ್ಲ ಎಂದು ವಿವರಿಸಿದರು. ಸ್ಪೀಕರ್ ಖಾದರ್ ಅವರ ನಡೆ ಪ್ರಶ್ನಾರ್ಥಕವಾಗಿದೆ ಎಂದು ಟೀಕಿಸಿದರು.