Menu

ಕರ್ನಾಟಕದಲ್ಲಿ 40% ಕಮಿಷನ್ ಸಂಸ್ಕೃತಿ ತಂದವರು ಬಿಜೆಪಿಯವರು: ಲಕ್ಷ್ಮಿ ಹೆಬ್ಬಾಳ್ಕರ್

“ದೇಶದ ಆಸ್ತಿಯನ್ನು ಅದಾನಿ–ಅಂಬಾನಿಗೆ ಬರೆದುಕೊಟ್ಟವರು, 23 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದವರು ಬಿಜೆಪಿಯವರು. ಕರ್ನಾಟಕದಲ್ಲಿ 40% ಕಮಿಷನ್ ಸಂಸ್ಕೃತಿ ತಂದವರು ಅವರೇ. ಹಲವಾರು ಪ್ರಕರಣಗಳಲ್ಲಿ ಬಿಜೆಪಿ ಮುಖ್ಯಮಂತ್ರಿ ಗಳು ಜೈಲಿಗೆ ಹೋಗಿ ಬಂದಿದ್ದಾರೆ. ಈ ಸ್ಥಿತಿಯಲ್ಲಿ ಕಾಂಗ್ರೆಸ್ ಬಗ್ಗೆ ಮಾತನಾಡಲು ಬಿಜೆಪಿಗೆ ಯಾವ ನೈತಿಕತೆ ಇದೆ?” ಎಂದು ಸಚಿವೆ  ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ನರೇಗಾ ಯೋಜನೆಯ ಹೆಸರನ್ನು ಬದಲಾಯಿಸಲು ಮುಂದಾಗಿರುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನರೇಗಾ ಹಳ್ಳಿಗರ ಜೀವನಾಡಿ. ಕಳೆದ 20 ವರ್ಷಗಳಿಂದ ಈ ಯೋಜನೆ ಗ್ರಾಮೀಣ ಜನರ ಜೀವನಕ್ಕೆ ಆಸರೆಯಾಗಿದೆ. ನರೇಗಾ ಎಂಬ ಹೆಸರು ಮಾತ್ರವಲ್ಲ, ಅದರ ಹಿಂದೆ ಮಹಾತ್ಮ ಗಾಂಧಿಯವರ ಗ್ರಾಮಸ್ವರಾಜ್ಯದ ಕನಸು ಇದೆ. ಗಾಂಧಿಯವರ ಆಶಯಕ್ಕೆ ಕೊಡಲಿ ಪೆಟ್ಟು ಹಾಕಲಾಗುತ್ತಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ತರಾತುರಿಯಲ್ಲಿ ಯಾವುದೇ ಚರ್ಚೆ ನಡೆಸದೆ ಯೋಜನೆಯಲ್ಲಿ ಬದಲಾವಣೆ ತರುತ್ತಿದೆ ಎಂದು ಆರೋಪಿಸಿದ ಅವರು, “ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಧಾರ ಮಾಡಲಾಗಿದೆ. ಇದರಿಂದ ಗ್ರಾಮ ಪಂಚಾಯತಿಗಳ ಹಕ್ಕು ಕಸಿದುಕೊಳ್ಳಲಾಗಿದೆ. ಹಳ್ಳಿಗಳ ಕೆಲಸವನ್ನು ಡೆಲ್ಲಿ ಕುಳಿತು ನಿರ್ಧರಿಸುವ ಯೋಚನೆ ಇದಾಗಿದೆ” ಎಂದರು.

ಬಿಜೆಪಿಯವರು ನರೇಗಾ ಯೋಜನೆಯಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದು, ಹಣ ದುರುಪಯೋಗದ ಹೆಸರಿನಲ್ಲಿ 12 ವರ್ಷಗಳ ನಂತರ ಪ್ರಶ್ನೆ ಎತ್ತಿರುವುದು ನಾಚಿಕೆಗೇಡು, ಇಷ್ಟು ದಿನ ಬಿಜೆಪಿ ಏನು ಮಾಡುತ್ತಿತ್ತು ಎಂದು ಪ್ರಶ್ನಿಸಿದರು. ನರೇಗಾ ಮರುಜಾರಿಗಾಗಿ ಆರು ಕೋಟಿ ಕುಟುಂಬಗಳ ಪರವಾಗಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಬೆಳಗಾವಿ ಗಡಿ ಪ್ರದೇಶದಲ್ಲಿ ನಡೆದ ನಗದು ವಶಪಡಿಸಿಕೊಳ್ಳುವ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಬೆಳಗಾವಿ ಗಡಿಯಲ್ಲಿ 400 ಕೋಟಿ ರೂ. ಕಳ್ಳತನವಾಗಿದ್ದು, 2000 ರೂ. ಮುಖಬೆಲೆಯ ನೋಟುಗಳು ಸಿಕ್ಕಿವೆ. ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕ ಗಡಿ ಭಾಗದಲ್ಲಿ ಘಟನೆ ನಡೆದಿದೆ. ಬೆಳಗಾವಿ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಆದರೆ ಮಹಾರಾಷ್ಟ್ರ ಸರ್ಕಾರದಿಂದ ಸಹಕಾರ ಸಿಗುತ್ತಿಲ್ಲ ಎಂದರು.

ಈ ಪ್ರಕರಣವನ್ನು ಕಾಂಗ್ರೆಸ್‌ಗೆ ಸೇರಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ ಸಚಿವೆ, ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುವಂತೆ ಬಿಜೆಪಿ ವರ್ತಿಸುತ್ತಿದೆ. ಗುಜರಾತ್‌ನಿಂದ ಬಂದಿದೆ ಎಂದರೆ ಅಲ್ಲಿ ಯಾವ ಸರ್ಕಾರ ಇದೆ? ಎಂದು ವ್ಯಂಗ್ಯವಾಡಿದರು. ಬಿಜೆಪಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Related Posts

Leave a Reply

Your email address will not be published. Required fields are marked *