ರಾಜ್ಯಪಾಲರು ಸರ್ಕಾರಕ್ಕೆ ಬುದ್ದಿ ಹೇಳಬೇಕು ಎಂದು ಮನವಿ ಮಾಡಿದ್ದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ಶಾಸಕರ ಅಮಾನತು ಸಂಬಂಧ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಪ್ರಜಾಪ್ರಭುತ್ವ ವಿರೋಧಿ ನಡೆ ಅನುಸರಿಸ ದಂತೆ ರಾಜ್ಯಪಾಲರು ಸರ್ಕಾರಕ್ಕೆ ಬುದ್ದಿ ಹೇಳಬೇಕು ಎಂದು ಮನವಿ ಮಾಡಿರುವುದಾಗಿ ಹೇಳಿದ್ದಾರೆ.
ಮಾರ್ಚ್ 21ರಂದು ವಿಧಾನಸಭೆಯ 18 ಬಿಜೆಪಿ ಸದಸ್ಯರನ್ನು 6 ತಿಂಗಳಿಗೆ ಅಮಾನತು ಮಾಡಿರುವ ಕಾಂಗ್ರೆಸ್ ಸರ್ಕಾರದ ಆದೇಶಕ್ಕೆ ಸಂಬಂಧಿಸಿದಂತೆ ಈ ಪತ್ರ ಬರೆಯಲಾಗುತ್ತಿದೆ. ಅಂದು ವಿಧಾನಸಭೆಯ ಅಧಿವೇಶನದಲ್ಲಿ ಹನಿಟ್ರ್ಯಾಪ್ ಮತ್ತು ಮುಸ್ಲಿಮರಿಗೆ ಶೇ.4ರಷ್ಟು ಮೀಸಲು ಸಂಬಂಧ ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚೆಗಳು ತೀವ್ರ ವಾಗ್ವಾದಕ್ಕೆ ಕಾರಣವಾದವು. ವಿರೋಧ ಪಕ್ಷದ ಸದಸ್ಯರಾಗಿ ನಾವು ಸಭಾಧ್ಯಕ್ಷರ ಪೀಠದ ಬಳಿ ಪ್ರತಿಭಟನೆ ನಡೆಸಿದೆವು. ಇದನ್ನು ಸ್ಪೀಕರ್ ಹಾಗೂ ಆಡಳಿತ ಪಕ್ಷ ತಪ್ಪಾಗಿ ಗ್ರಹಿಸಿದೆ. ಪ್ರತಿಭಟನೆ ಮಾಡುವಾಗ ನಾವು ಸದನದ ಸಭ್ಯತೆಗೆ ಸಮಂಜಸವಲ್ಲದ ನಡವಳಿಕೆ ತೋರಿರು ವುದಾಗಿ ಅವರು ಭಾವಿಸಿದ್ದಾರೆ. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 348ರ ಅಡಿಯಲ್ಲಿ 18 ಶಾಸಕರನ್ನು ಆರು ತಿಂಗಳ ಅವಧಿಗೆ ಅಮಾನತುಗೊಳಿಸಲಾಯಿತು ಎಂದು ಬಿಜೆಪಿ ಮನವಿಯಲ್ಲಿ ವಿವರಿಸಿದೆ.
ಅಮಾನತು ಮಾಡಿದ್ದರ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದೇವೆ. ಸ್ಪೀಕರ್ ಜತೆ ಮಾತನಾಡುವುದಾಗಿ ರಾಜ್ಯಪಾಲರು ಹೇಳಿದ್ದಾರೆ. ಸಿಎಂ, ಸ್ಪೀಕರ್ ಜೊತೆ ನಾನು, ವಿಜಯೇಂದ್ರ ಮಾತನಾಡಿದ್ದೇವೆ. ರಾಜ್ಯಪಾಲರು ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.