ಮೈಕೊರೆಯುವ ಚಳಿಗೆ ಬೀದರ್ ಜಿಲ್ಲೆಯ ಜನರು ತತ್ತರಿಸಿದ್ದಾರೆ, ಇಲ್ಲಿ ಕನಿಷ್ಠ ತಾಪಮಾನ ತೀವ್ರ ಕುಸಿತವಾಗಿದ್ದು, 7.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಜನ ಹೈರಾಣಾಗಿದ್ದಾರೆ.
ಜನವರಿ ತಿಂಗಳಲ್ಲಿ ಇನ್ನಷ್ಟು ಚಳಿ ಇರಲಿದ್ದು, 5 ಡಿಗ್ರಿ ವರೆಗೂ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಟೊಪ್ಪಿ, ಸ್ವೆಟ್ಟರ್, ಗ್ಲೌಸ್ ಧರಿಸಿ ಮನೆಯಿಂದ ಜನ ಮನೆಯಿಂದ ಹೊರ ಬರಬೇಕಾಗಿದೆ. ಡಿ.17ರವರೆಗೂ ಇದೇ ರೀತಿ ಚಳಿ ಮುಂದುವರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಹಲವು ಜಿಲ್ಲೆಗಳಲ್ಲಿ ಚಳಿ ಸಂಬಂಧ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಬೆಂಗಳೂರಿನಲ್ಲಿ ಹಲವು ದಿನಗಳಿಂದ ರಾತ್ರಿ- ಹಗಲು ಚಳಿ, ಗಾಳಿಯ ವಾತಾವರಣ ಮುಂದುವರಿದಿದೆ.
ರಾಜ್ಯದೆಲ್ಲೆಡೆ ಇನ್ನೆರಡು ದಿನಗಳಲ್ಲಿ ಶೀತದಲೆ ಅಪ್ಪಳಿಸಲಿದ್ದು, ಬೆಂಗಳೂರಿನ ತಾಪಮಾನ 14 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 2 ದಿನಗಳಲ್ಲಿ ಶೀತದ ಅಲೆಗಳು ಉಂಟಾಗುವ ಸಾಧ್ಯತೆಯಿದೆ. ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ.
ವೈದ್ಯರು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಲು ಸಲಹೆ ನೀಡಿದ್ದು, ಮಕ್ಕಳು ಹಾಗೂ ಹಿರಿಯರ ಆರೈಕೆ ಹೆಚ್ಚಿನ ಗಮನ ವಹಿಸುವಂತೆ ತಿಳಿಸಿದ್ದಾರೆ. ಬೆಳಗಿನ ವಾಕ್ ಮತ್ತು ವ್ಯಾಯಾಮವನ್ನು ತಪ್ಪಿಸಿ ಬೆಚ್ಚನೆಯ ಉಡುಪು ಧರಿಸಿ ಬಿಸಿ ಆಹಾರ ಸೇವಿಸುವಂತೆ ಸಲಹೆ ನೀಡಿದ್ದಾರೆ.


