ಕಿರು ಸಾಲ, ಸಣ್ಣ ಸಾಲ, ಖಾಸಗಿ ಹಣಕಾಸು ಮತ್ತು ಇತರೆ ಅನಿಯಂತ್ರಿತ ಲೇವಾದೇವಿ ಮಾಫಿಯಾಗಳಿಂದ ಸಾಲ ಪಡೆದವರಿಗೆ ಉಂಟಾಗುವ ಕಿರುಕುಳ ತಪ್ಪಿಸಿ ರಕ್ಷಣೆ ನೀಡುವ ಉದ್ದೇಶದಿಂದ ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ‍್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕ 2025 ನ್ನು ವಿಧಾನ ಸಭೆಯಲ್ಲಿ ಗುರುವಾರ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಮಂಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಮಂಡಿಸಿದ ಈ ವಿಧೇಯಕದಲ್ಲಿ ಸಾಲಗಳನ್ನು ಪಡೆಯುವ ಮತ್ತು ಸಾಲಗಳಲ್ಲೇ ಮುಳುಗಿ ಹೋಗಿರುವ ಅಸಹಾಯ ಕರನ್ನು ಕಾಪಾಡುವ ಮತ್ತು ರಕ್ಷಿಸುವ ಉದ್ದೇಶವಿದೆ. ಬಡ ಗ್ರಾಮೀಣ ನಿರ್ಗತಿಕರು, ನಗರ ಕಾರ್ಮಿಕರು, ಸಮಾಜದ ಅಶಕ್ತ ಮತ್ತು ದುರ್ಬಲ ವರ್ಗದವ ರನ್ನು ಪೀಡಿಸುತ್ತಿವೆ ಮತ್ತು ಉಸಿರುಗಟ್ಟಿಸುತ್ತಿವೆ. ಸಾಲಗಾರನಿಗೆ ಕೆಲವೊಮ್ಮೆ ಹೆಚ್ಚಿನ ಬಡ್ಡಿಯನ್ನು ಪಾವತಿಸಲು ಒತ್ತಾಯಿಸಲಾಗುತ್ತಿದೆ. ಲೇವಾದೇವಿದಾರರ ಕಾರಣದಿಂದಾಗಿ ಸಾಲಗಾರರು ಬೀದಿಗೆ ಬರುವಂತೆ ಮತ್ತು ಆತ್ಮಹತ್ಯೆ ಮಾಡಿಕೊಳ‍್ಳುವಂತೆ ಒತ್ತಾಯಪಡಿಸಲಾಗುತ್ತಿದೆ ಎಂದು ಪ್ರಸ್ತಾಪಿಸಲಾಗಿದೆ.
ಮೈಕ್ರೊ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಸಂಸ್ಥೆಗಳು ರೈತರಿಂದ ಕೃಷಿ ಉತ್ಪನ್ನಗಳನ್ನು ಪಡೆದು ಕೃಷಿ ಸರಕುಗಳ ಖರೀದಿ ಮತ್ತು ಮಾರಾಟದಲ್ಲಿ ತೊಡಗಿರುವ ಅಥವಾ ಬಡವರಿಗೆ ಸಾಲವನ್ನು ನೀಡುವ ಮತ್ತು ಅಸಲನ್ನು ಬಡ್ಡಿಯೊಂದಿಗೆ ನಗದು ಅಥವಾ ವಸ್ತು ರೂಪದಲ್ಲಿ ತೆಗೆದುಕೊಳ್ಳುವ ಸಂದರ್ಭದಲ್ಲಿ ದುಬಾರಿ ಬಡ್ಡಿದರಗಳು, ಅನುಚಿತ ತೊಂದರೆ, ಬಲವಂತ ಮತ್ತು ಅಮಾನವೀಯ ವಸೂಲಾತಿ ಮಾಡುವುದು ಕಂಡುಬಂದಿದೆ. ಆರ್ಥಿಕವಾಗಿ ದುರ್ಬಲ ಗುಂಪು ಗಳು ಮತ್ತು ವ್ಯಕ್ತಿಗಳು, ವಿಶೇಷವಾಗಿ ಮಹಿಳೆಯರು ಹಾಗೂ ಮಹಿಳಾ ಸ್ವಸಹಾಯ ಗುಂಪುಗಳನ್ನು ರಕ್ಷಿಸಲು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೈಕೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳನ್ನು ನಿಯಂತ್ರಿಸಲು ಪರಿಣಾಮಕಾರಿ ಕಾರ್ಯವ್ಯವಸ್ಥೆಯನ್ನು ಸೃಜಿಸುವ ಉದ್ದೇಶ ವನ್ನು ವಿಧೇಯಕ ಒಳಗೊಂಡಿದೆ.
ಕಾನೂನು ಚೌಕಟ್ಟುಗಳವರೆಗೆ ಕಾರ್ಯಾಚರಿಸುವ ನೋಂದಾಯಿತವಲ್ಲದ ಲೇವಾದೇವಿದಾರರನ್ನು ನಿಯಂತ್ರಿಸುವುದು, ಮೂಲಭೂತ ಹಕ್ಕುಗಳ ರಕ್ಷಣೆಯನ್ನು ಖಚಿತಪಡಿಸುವುದು, ಆರ್ಬಿಐನ ಕಣ್ತಪ್ಪಿಗೆ ಒಳಪಡದೆ ನೋಂದಾಯಿತವಲ್ಲದ ಮತ್ತು ಅನಿಯಂತ್ರಿತ ಲೇವಾದೇವಿದಾರರಿಗೆ ಈ ವಿಧೇಯಕ ಅನ್ವಯವಾಗಲಿದೆ. ಕಾನೂನುಬದ್ಧ ಲೇವಾದೇವಿಯನ್ನು ನಿಷೇಧಿಸುವುದಿಲ್ಲ. ಆದರೆ, ಬಲವಂತದ ವಸೂಲಾತಿಗಳನ್ನು ನಿರ್ಬಂಧಿಸುತ್ತದೆ.
ಬಲವಂತದ ಹಾಗೂ ಅಮಾನವೀಯ ಸಾಲ ವಸೂಲಾತಿಯಲ್ಲಿ ತಪ್ಪಿತಸ್ಥರಿಗೆ ಹತ್ತು ವರ್ಷಗಳಿಗೆ ವಿಸ್ತರಿಸಬಹುದಾದ ಜೈಲುವಾಸ, 5 ಲಕ್ಷ ರೂ. ವರೆಗೆ ವಿಸ್ತರಿಸ ಬಹುದಾದ ದಂಡವನ್ನು ಈ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಅಧ್ಯಾದೇಶದ ಮೂಲಕ ಜಾರಿ ಮಾಡಿದ್ದ ಕಾನೂನನ್ನು ಈ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.