ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲೆಂದೇ ರಾಜ್ಯ ಸರ್ಕಾರವು ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ(ಪ್ರತಿಬಂಧಕ) ಮಸೂದೆ-2025 ತಂದಿದೆ ಎಂದು ವಿಧಾನಸಭೆ ಪ್ರತಿ ಪಕ್ಷದ ನಾಯಕ ಆರ್ ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಸುವರ್ಣ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಮಸೂದೆ ರಾಜ್ಯ ಸರ್ಕಾರದ ಪಿತೂರಿಯಾಗಿದೆ. ತಪ್ಪು ಮಾಡಿದವರ, ಅವಾಚ್ಯ ಶಬ್ದ ಬಳಕೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಈಗಾಗಲೇ ಕಾನೂನು ಜಾರಿಯಲ್ಲಿದೆ. ಹೀಗಿರುವಾಗ ಸರ್ಕಾರ ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಬೇಕೆಂದು ಈ ಮಸೂದೆ ತಂದಿದೆ ಎಂದು ರೂರಿದ್ದಾರೆ.
ಚುನಾವಣೆ ಗೆಲ್ಲಲಷ್ಟೇ ಗ್ಯಾರಂಟಿ ಬೇಕು
ಇಷ್ಟು ದಿನ ಬಿಜೆಪಿಯವರು ಗ್ಯಾರಂಟಿಗಳ ವಿರೋಧಿಗಳು ಎನ್ನುತ್ತಿದ್ದರು. ಈಗ ಕಾಂಗ್ರೆಸ್ ಶಾಸಕರೇ ಅಭಿವೃದ್ಧಿಗೆ ಹಣ ಕೊಡಿ ಎಂದು ಕೇಳುತ್ತಿದ್ದಾರೆ. ಇವರಿಗೆ ಚುನಾವಣೆ ಗೆಲ್ಲಲು ಗ್ಯಾರಂಟಿ ಬೇಕು. ಉತ್ತರ ಕರ್ನಾಟಕ ಭಾಗದ ರಸ್ತೆಗಳು ಹಾಳಾಗಿವೆ. ಸರ್ಕಾರದ ವಿರುದ್ಧ ಶೇ.63 ಭ್ರಷ್ಟಾಚಾರದ ಆರೋಪವಿದೆ. ಅಧಿಕಾರಿಗಳು ಲೂಟಿಯಲ್ಲಿ ತೊಡಗಿದ್ದಾರೆ. ಸರ್ಕಾರ ಸತ್ತಿದೆ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಗುತ್ತಿಗೆದಾರರು, ಲೋಕಾಯುಕ್ತ ಎಲ್ಲರೂ ಹೇಳಿದ ಬಳಿಕ ಕಾಂಗ್ರೆಸ್ ಶಾಸಕರೂ ಇದನ್ನೇ ಹೇಳುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ನಮ್ಮೂರಿಗೆ ಏನು ಮಾಡಿದ್ದೀರಿ ಎಂದು ಶಾಸಕರನ್ನು ಕೇಳಿದರೆ, ಅವರ ಬಳಿ ಉತ್ತರ ಇಲ್ಲ. ನಾವು ಗ್ಯಾರಂಟಿ ಕೇಳಿರಲಿಲ್ಲ ಎಂದು ಮಹಿಳೆಯರು ಹೇಳುತ್ತಿದ್ದಾರೆ. ಗೃಹಲಕ್ಷ್ಮೀ ಹಣ ಹಬ್ಬ ಮತ್ತು ಚುನಾವಣೆ ಬಂದಾಗ ಮಾತ್ರ ಬರುತ್ತದೆ. ಗ್ಯಾರಂಟಿ ಹೆಸರಿನಲ್ಲಿ ಬೆಲೆ ಏರಿಕೆಯಾಗಿದೆ. ಲಂಚ ಕೊಟ್ಟೇ ಬಂದಿದ್ದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಅಸಮಾಧಾನ ಇರುವಾಗ ಜನಸಾಮಾನ್ಯರಿಗೂ ಬೇಸರ ಇರುತ್ತದೆ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.


