ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿ, ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಫೆ.26ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಜನಪ್ರತಿನಿಧಿಗಳ ಕೋರ್ಟ್ ಆದೇಶಿಸಿದೆ.
ಬೈರತಿ ಬಸವರಾಜ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಐಡಿ ಮತ್ತೆ ಪೊಲೀಸ್ ಕಸ್ಟಡಿಗೆ ನೀಡವಂತೆ ಮನವಿ ಮಾಡಿತ್ತು. ವೈದ್ಯಕೀಯ ವರದಿ ಆಧರಿಸಿ ಜೈಲಿಗೆ ಕಳುಹಿಸುವಂತೆ ಬೈರತಿ ಪರ ವಕೀಲರು ಮನವಿ ಮಾಡಿದ್ದರು.
ಫೆ.26ರವರೆಗೆ ಬೈರತಿ ಬಸವರಾಜ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಯದೇವ ಆಸ್ಪತ್ರೆಯಲ್ಲಿ ನೀಡಿರುವ ಡಯೆಟ್ ಪ್ಲಾನ್ ಅನ್ನು ಜೈಲಿನಲ್ಲಿ ಮುಂದುವರಿಸಿ, ಡಯೆಟ್ ಪ್ಲಾನ್ ಪ್ರಕಾರವೇ ಊಟ ನೀಡಲು ನ್ಯಾಯಾಲಯ ಸೂಚಿಸಿದೆ.
ಬಸವರಾಜ್‌ಗೆ ಫೆಬ್ರವರಿ 21ರವರೆಗೆ ಏಳು ದಿನಗಳ ಪೊಲೀಸ್ ಕಸ್ಟಡಿ ವಿಧಿಸಿ ಈ ಹಿಂದೆ ನ್ಯಾಯಾಲಯ ಆದೇಶ ನೀಡಿತ್ತು, ಬೈರತಿ ಬಸವರಾಜ್‌ಗೆ ಹೃದಯ ಸಮಸ್ಯೆ ಇದೆ ಎಂದು ಹಿಂದೆ ಹೇಳಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಡೆಸಿದ ಪರೀಕ್ಷೆಯಲ್ಲಿ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ ಎಂದು ವರದಿ ಹೇಳಿತ್ತು.
ಪ್ರಕರಣದ ಆರೋಪಿಗಳಾದ ಅಜಿತ್, ಬೈರತಿ ಬಸವರಾಜ್ ಮತ್ತು ಕೊಲೆಯಾದ ಬಿಕ್ಲು ಶಿವ ಮಧ್ಯೆ ಸಾಕಷ್ಟು ವ್ಯವಹಾರ ಬಗ್ಗೆ ಮಾಹಿತಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ಬೈರತಿ ಬಸವರಾಜ್ ಇಂಡಿಗೋ ವಿಮಾನದಲ್ಲಿ ಅಹಮದಾಬಾದ್‌ನಿಂದ ಬೆಂಗಳೂರಿಗೆ ಆಗಮಿಸಿದಾಗ ವಿಮಾನ ನಿಲ್ದಾಣದ ಟರ್ಮಿನಲ್ 1 ರಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದರು. ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ವಜಾಗೊಂಡ ಬಳಿಕ ಸುಪ್ರೀಂಕೋರ್ಟ್‌ಗೆ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.


