ಬಿಹಾರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ಚುನಾವಣೆ ಆಯೋಗ ಬಹಳ ಗಂಭೀರವಾಗಿ ಪರಿಗಣಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತದೆ. ಈ ಚುನಾವಣೆ ಮುಂದೆ ಬರುವ ಎಲ್ಲ ಚುನಾವಣೆಗಳಿಗೆ ಮಾದರಿಯಾಗಲಿದೆ. ಚುನಾವಣೆಗೆ ಮುನ್ನ ಆಯೋಗ ತ್ವರಿತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಕೈಗೊಂಡಿತು. ಇದಕ್ಕೆ ವ್ಯಾಪಕ ವಿರೋಧ ಪ್ರತಿಪಕ್ಷಗಳಿಂದ ಕಂಡು ಬಂದಿತು. ಕಾರಣ ಬೇರೆ ದೇಶಗಳಿಂದ ಅಕ್ರಮವಾಗಿ ವಲಸೆ ಬಂದಿದ್ದವರು ಮತದಾರರ ಪಟ್ಟಿಯಲ್ಲಿ ಸೇರಿಕೊಂಡಿದ್ದು. ಚುನಾವಣೆ ಆಯೋಗ ನಿರ್ದಾಕ್ಷಿಣ್ಯವಾಗಿ ಈ ಹೆಸರುಗಳನ್ನು ತೆಗೆದು ಹಾಕಿತು.
ಇದರ ಬಗ್ಗೆ ತೀವ್ರ ವಿರೋಧ ನಡೆದು ಸುಪ್ರೀಂ ಕೋರ್ಟ್ ಕೂಡ ಚರ್ಚೆ ನಡೆಸಿತು. ಆಗ ಆಧಾರ್ ಕಾರ್ಡ್ ಹೊಂದಿದವರೆಲ್ಲ ಮತದಾರರಾಗುವುದಿಲ್ಲ ಎಂಬುದನ್ನು ಆಯೋಗ ಸ್ಪಷ್ಟಪಡಿಸಿತು. ಆಧಾರ್ ಕಾರ್ಡ್ ಪೌರತ್ವ ನೀಡುವುದಿಲ್ಲ ಎಂಬುದನ್ನು ತಿಳಿಸಿತು. ಇದನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತು. ಒಟ್ಟು ೪೭ ಲಕ್ಷ ಜನರ ಹೆಸರು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಈಗ ೭.೬ ಕೋಟ ಜನ ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಬಿಹಾರ್ ರಾಜ್ಯಕ್ಕೆ ಆಯೋಗ ಭೇಟಿ ಎಲ್ಲವನ್ನು ಪರಿಶೀಲಿಸಿ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಸಿದೆ.
ಅದರಂತೆ ಮತಗಟ್ಟೆಯೊಳಗೆ ಮೊಬೈಲ್ ತೆಗೆದುಕೊಂಡು ಹೋಗುವ ಹಾಗಿಲ್ಲ. ಪ್ರತಿ ಬೂತ್ನಲ್ಲಿ ಚುನಾವಣೆ ಸಿಬ್ಬಂದಿಗೆ ಪ್ರತ್ಯೇಕ ಗುರುತಿನ ಚೀಟಿ ನೀಡಲಾಗುವುದು. ಬೇರೆಯವರು ಮತಗಟ್ಟೆ ಪ್ರವೇಶಿಸುವಂತಿಲ್ಲ. ಪ್ರತಿ ಮತಗಟ್ಟೆಯಲ್ಲಿ ನಡೆಯುವ ವಿದ್ಯಮಾನಗಳನ್ನು ದಾಖಲಿಸಲು ಸಿಸಿಕ್ಯಾಮೆರಾ ಅಳವಡಿಕೆ. ಪ್ರತಿ ಮತಗಟ್ಟೆಗೆ ೧೨೦೦ ಮತದಾರರು ಮಾತ್ರ. ಮತ ಎಣಿಕೆಯಲ್ಲಿ ಅನುಮಾನ ಬಂದಲ್ಲಿ ಆಯಾ ಮತಗಟ್ಟೆಯ ವಿವಿಪ್ಯಾಟ್ ಪರಿಶೀಲನೆ. ಇಡೀ ಕ್ಷೇತ್ರದ ಮರು ಎಣಿಕೆ ಇಲ್ಲ. ಅಂಚೆ ಮೂಲಕ ಬಂದ ಮತಗಳ ಎಣಿಕೆ ಎವಿಎಂ ಎಣಿಕೆ ಮುಕ್ತಾಯಕ್ಕೆ ಮುನ್ನ ನಡೆಯಲಿದೆ. ಇದೇ ನಿಯಮಗಳನ್ನು ಎಲ್ಲ ಕ್ಷೇತ್ರಗಳಿಗೂ ಅನ್ವಯಿಸಲಾಗುವುದು. ಹೊರ ದೇಶಗಳಿಂದ ಅಕ್ರಮವಾಗಿ ವಲಸೆ ಬಂದವರನ್ನು ತಮ್ಮ ವೋಟ್ ಬ್ಯಾಂಕ್ ರೀತಿ ಬಳಸಿಕೊಳ್ಳಲು ಕೆಲವು ರಾಜಕೀಯ ಪಕ್ಷಗಳು ಬಳಸಿಕೊಳ್ಳಲು ಯತ್ನಿಸುತ್ತಿರುವುದು ಆಯೋಗದ ಗಮನಕ್ಕೆ ಬಂದಿದ್ದರಿಂದ ತ್ವರಿತ ಮತದಾರರ ಪಟ್ಟಿ ಪರಿಶೀಲನೆ ಕೈಗೊಂಡಿತು. ಇದಕ್ಕೆ ಹಲವು ರಾಜಕೀಯ ಪಕ್ಷಗಳು ಅಯೋಗದ ಕ್ರಮವನ್ನು ಪ್ರಶ್ನಿಸಿದ್ದವು. ಅಲ್ಲದೆ ಆಯೋಗಕ್ಕೆ ಅಧಿಕಾರವಿಲ್ಲ ಎಂದೂ ಆರೋಪಿಸಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಈ ವಾದವನ್ನು ಒಪ್ಪಿಲ್ಲ. ಆಯೋಗದ ಅಧಿಕರವನ್ನು ಎತ್ತಿ ಹಿಡಿದಿರುವುದಲ್ಲದೆ ಆಯೋಗ ಸ್ವಾಯತ್ತ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿದೆ.
ಹೀಗಾಗಿ ಮುಂಬರುವ ಚುನಾವಣೆಗಳಲ್ಲಿ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅವಕಾಶ ನೀಡಿದಂತಾಗಿದೆ. ಹಿಂದೆ ಟಿ.ಎನ್, ಶೇಷನ್ ಆಯುಕ್ತರಾಗಿದ್ದ ಕಾಲದಲ್ಲಿ ಅಯೋಗ ಬಹಳ ಕಟ್ಟುನಿಟ್ಟಿನಿಂದ ವರ್ತಿಸುತ್ತಿತ್ತು.ಈಗ ಆಡಳಿತ ಪಕ್ಷದ ಕೈಗೊಂಬೆಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಅದೆಲ್ಲವೂ ನಿರಾಧಾರ ಎಂಬುದನ್ನು ಆಯೋಗ ತನ್ನ ಕ್ರಮದಿಂದ ತೋರಿಸಿಕೊಟ್ಟಿದೆ. ಆಯೋಗ ಶಾಸನಬದ್ಧವಾಗಿ ರಚಿತಗೊಂಡಿರುವುದರಿಂದ ಅದರ ಕ್ರಮಗಳು ನ್ಯಾಯಾಲಯಕ್ಕೆ ಸಮಾನ ಎಂಬುದನ್ನು ರಾಜಕಾರಣಿಗಳು ಮನಗಾಣಬೇಕು. ಆಯೋಗ ತಾನೇ ಹಾಕಿದ ಚೌಕಟ್ಟನ್ನು ಮೀರುವಂತಿಲ್ಲ. ಆಯೋಗದ ಮೇಲೆ ಆರೋಪ ಮಾಡುವಾಗ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಎಚ್ಚರವಹಿಸುವುದು ಅಗತ್ಯ. ಪ್ರಜಾಪ್ರಭುತ್ವದಲ್ಲಿ ಚುನಾವಣೆ ಆಯೋಗಕ್ಕೆ ಜನತಾ ಪ್ರಾತಿನಿಧ್ಯ ಕಾಯ್ದೆಯಂತೆ ಹೆಚ್ಚಿನ ಅಧಿಕಾರ ನೀಡಿದ್ದೇವೆ. ಈ ಅಧಿಕಾರ ಚಲಾಯಿಸುವಾಗ ಆಯೋಗ ಕೂಡ ಎಚ್ಚರವಹಿಸುವುದು ಅಗತ್ಯ. ಚುನಾವಣೆ ಮುಕ್ತ ಮತ್ತು ನಿರ್ಭಯವಾಗಿ ನಡೆಯಬೇಕೆಂದು ಪ್ರತಿ ಮತದಾರ ಬಯಸುತ್ತಾನೆ. ಮುಕ್ತ ಮತದಾನ ಪ್ರಜಾಪ್ರಭುತ್ವ ಜೀವಾಳ.