Menu

ಬಿಡದಿ ಟೌನ್ ಶಿಪ್ ಯೋಜನೆ ಕಾಂಗ್ರೆಸ್ ನಾಯಕರು ಲೂಟಿ ಮಾಡಲು ರೂಪಿಸಿದ ಯೋಜನೆ: ಆರ್.ಅಶೋಕ

ಬೆಂಗಳೂರು: ಬಿಡದಿ ಟೌನ್ ಶಿಪ್ ಯೋಜನೆ ಎಂಬುದು ಕಾಂಗ್ರೆಸ್ ನಾಯಕರು ಲೂಟಿ ಮಾಡಲು ರೂಪಿಸಿದ ಯೋಜನೆ. ಇದರಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಯಾವುದೇ ಪಾತ್ರವಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಮಾಡುತ್ತಿರುವ ಭೂ ಸ್ವಾಧೀನ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಿಂದಾಗಿ ಬೆಂಗಳೂರಿಗೆ ಹಾನಿಯಾಗಲಿದೆ. ನಗರದ ಸುತ್ತಮುತ್ತಲಿನ ಜಮೀನುಗಳ ಬೆಲೆ ಹೆಚ್ಚಿಸಲು ಈ ರೀತಿ ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಭೂ ಸ್ವಾಧೀನ ಎನ್ನುವುದೇ ದೊಡ್ಡ ಮಾರಿ. ಈ ಮನೆಹಾಳು ಬುದ್ಧಿ ಕಾಂಗ್ರೆಸ್ ನಾಯಕರಿಗೆ ಬಂದಿದೆ ಎಂದರು.

ಈಗ ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಆರೋಪ ಮಾಡಲಾಗುತ್ತಿದೆ. ನಾನು ಕೂಡ ಕಂದಾಯ ಸಚಿವನಾಗಿದ್ದೆ. ಆಗ ಎಂದೂ ನಾನು ಭೂ ಸ್ವಾಧೀನ ಮಾಡಲು ಬರಲಿಲ್ಲ‌. ರೈತರು ಬೇಡ ಎಂದಾಗಲೇ ಸ್ವಾಧೀನ ಕೈ ಬಿಡಲಾಗಿತ್ತು. ಕಾಂಗ್ರೆಸ್ ಎಂದರೆ ರಿಯಲ್ ಎಸ್ಟೇಟ್ ಸರ್ಕಾರ ಎಂದರು.

ಗ್ಯಾರಂಟಿಗಳ ಹೆಸರಲ್ಲಿ ಕಾಂಗ್ರೆಸ್ ಸರ್ಕಾರ 2 ಸಾವಿರ ರೂ. ನೀಡಿ ಮತ್ತೊಂದು ಕಡೆ ಬೆಲೆ ಏರಿಕೆ ಮಾಡಲಾಗಿದೆ. ಒಂದು ಕಡೆ ಹಣ ನೀಡಿದರೆ ಮನೆಯ ಯಜಮಾನನಿಂದ ಸುಮಾರು 8,000 ರೂ. ಲೂಟಿ ಮಾಡುತ್ತಿದ್ದಾರೆ. 3,000 ಎಕರೆ ಜಮೀನನ್ನು ಕೊಳ್ಳೆ ಹೊಡೆಯಲು ಬಿಡದಿ ಟೌನ್ ಶಿಪ್ ಯೋಜನೆಯಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಸ್ವಾಧೀನ ಮಾಡಲಾಗುತ್ತದೆ. ದುಡ್ಡು ಮಾಡಲು ಈ ರೀತಿಯ ಯೋಜನೆ ತರಲಾಗಿದೆ ಎಂದರು.

ನೈಸ್ ರಸ್ತೆ ಪಕ್ಕದಲ್ಲೇ ಮತ್ತೊಂದು ನೈಸ್ ರಸ್ತೆ ಮಾಡಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ 20-30 ಸಾವಿರ ಎಕರೆ ಸ್ವಾಧೀನ ಮಾಡಲಾಗುತ್ತದೆ. ಇದರಿಂದಲೂ ಹಣ ಲೂಟಿ ಮಾಡುವ ಪ್ಲಾನ್ ಇದೆ ಎಂದು ಅಧಿಕಾರಿಗಳಿಂದಲೇ ನನಗೆ ತಿಳಿದುಬಂದಿದೆ. ಯಾವ ರೈತರು ಜಮೀನು ನೀಡುತ್ತಾರೋ ಅವರ ಮನೆ ಹಾಳಾಗಲಿದೆ. ಶೇ.95 ರಷ್ಟು ರೈತರು ನಷ್ಟ ಹೊಂದಿ ಭಿಕ್ಷುಕರಾಗುತ್ತಾರೆ. ರೈತರ ಮಕ್ಕಳಿಗೆ ಭೂಮಿಯೇ ಇರುವುದಿಲ್ಲ ಎಂದರು.

Related Posts

Leave a Reply

Your email address will not be published. Required fields are marked *