“ಬಿ ಎಂದರೆ ಭಕ್ತಿ, ಜಿ ಎಂದರೆ ಜ್ಞಾನ, ಎಸ್ ಎಂದರೆ ಸಂಗಮ. ಹೀಗಾಗಿ ಭಕ್ತಿ, ಜ್ಞಾನದ ಸಂಗಮವೇ ಬಿಜಿಎಸ್” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಆದಿಚುಂಚನಗಿರಿ ಮಠದ ಆವರಣದಲ್ಲಿ ಶ್ರೀ ಅಭಯ ಆಂಜನೇಯ ಸ್ವಾಮಿ, ಶ್ರೀ ಪ್ರಸನ್ನ ಮಹಾಗಣಪತಿ ಮತ್ತು ಶ್ರೀ ಮಾತಾ ಲಲಿತಾಂಬಿಕಾ ದೇವಾಲಯದ ಕುಂಭಾಭಿಷೇಕ ಮಹೋತ್ಸವ ಮತ್ತು ಲೋಕಾರ್ಪಣಾ ಸಮಾರಂಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದರು.
“ದೇವರು ವರ ಹಾಗೂ ಶಾಪ ಎರಡನನ್ನೂ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ನಿಮಗೆ ಸಿಗುವ ಅವಕಾಶದಲ್ಲಿ ನೀವು ಏನು ಮಾಡುತ್ತೀರಿ ಎಂಬುದು ಬಹಳ ಮುಖ್ಯ. ನಮ್ಮ ಹಿರಿಯರು ಮನೆ ಹುಷಾರು, ಮಠ ಹುಷಾರು ಎಂದು ಹೇಳಿದ್ದಾರೆ. ನಾವು ನಮ್ಮ ಮನೆಗಳನ್ನು ಕಾಪಾಡಿಕೊಳ್ಳುವಂತೆ ಮಠಗಳನ್ನು ಕಾಪಾಡಿಕೊಳ್ಳಬೇಕು. ನಾವು ನಮ್ಮ ಶಕ್ತಿಗೆ ಅನುಸಾರ ನಾವು ಮಠಗಳಿಗೆ ದಾನ ಮಾಡಬೇಕು. ಮನುಷ್ಯನ ಆಸೆಗೆ ಕೊನೆಯಿಲ್ಲ. ನಾವು ನಮ್ಮ ಆಸೆಗಳನ್ನು ಬದಿಗಿಟ್ಟು ಕೈಲಾದಷ್ಟು ದಾನ ಮಾಡಬೇಕು” ಎಂದರು.
“ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ, ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಬಹಳ ಮುಖ್ಯ. ನೀವು ನಿಮ್ಮ ಬದುಕಿನಲ್ಲಿ ಸಮಾಜಕ್ಕೆ ದಾನ ಧರ್ಮ ಮಾಡುವ ಕೆಲಸ ಮಾಡಬೇಕು. ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ, ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮ್ ಇದಂ ಶರೀರಮ್ ಎಂಬ ಶ್ಲೋಕವಿದೆ. ಅಂದರೆ ಮರ, ನದಿ, ಹಸು ಎಲ್ಲವೂ ಪರರ ಉಪಕಾರಕ್ಕಾಗಿ ಇವೆ. ಅದೇ ರೀತಿ ನಮ್ಮ ದೇಹ ಕೂಡ ಪರೋಪಕಾರಕ್ಕೆ ಸೀಮಿತವಾಗಬೇಕು ಎಂಬುದು ಈ ಶ್ಲೋಕದ ಅರ್ಥ. ನೀವು ಶುದ್ಧ ಮನಸ್ಸಿನಿಂದ ಮಠ, ದೇವಾಲಯಗಳಿಗೆ ನಿಮ್ಮ ಕೈಲಾದಷ್ಟು ದಾನ ಮಾಡಿದರೆ ನಿಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ” ಎಂದು ತಿಳಿಸಿದರು.
“ನಿಮ್ಮ ಮನಸ್ಸಿಗೆ ನೆಮ್ಮದಿ ಶಾಂತಿ ಕೊಡಬೇಕು ಎಂದು ನಿರ್ಮಲಾನಂದ ಶ್ರೀಗಳು ಇಂದು ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಮಠದಲ್ಲಿ ಪ್ರಸನ್ನ ಮಹಾಗಣಪತಿ ಮತ್ತು ಶ್ರೀ ಮಾತಾ ಲಲಿತಾಂಬಿಕಾ ದೇವಾಲಯದ ಲೋಕರ್ಪಣೆ ಮಾಡಲಾಗಿದೆ. ದೇವಾಲಯ ಭಕ್ತ ಹಾಗೂ ಭಗವಂತನ ನಡುವೆ ವ್ಯವಹಾರ ನಡೆಯುವಂತಹ ಜಾಗ. ನಾವು ದೇವರನ್ನು ವಿವಿಧ ಹೆಸರಿನಲ್ಲಿ ಕರೆಯುತ್ತೇವೆ. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ, ದೇವನೊಬ್ಬ ನಾಮ ಹಲವು” ಎಂದರು.
“ಇಂದು ಅಭಯ ಆಂಜನೇಯ ಸ್ವಾಮಿ ದೇವಾಲಯವನ್ನು ಲೋಕಾರ್ಪಣೆ ಮಾಡಲಾಗಿದೆ. ರಾಮನ ತಂದೆ ದಶರಥನಿಗಿಂತ ರಾಮನ ಭಂಟ ಆಂಜನೇಯನ ದೇವಾಲಯ ಹೆಚ್ಚಾಗಿದೆ. ಆಂಜನೇಯ ಸೇವೆಯ ಪ್ರತೀಕ. ನಮ್ಮ ಸಮಾಜ ಸೇವೆ ಮಾಡುವವರನ್ನು ಹೆಚ್ಚಾಗಿ ಗುರುತಿಸುತ್ತದೆ. ನಾನು ಇಲ್ಲಿಗೆ ಭಕ್ತನಾಗಿ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ. ಅಕ್ಕಿ ಒಂದು ಕಡೆ ಇರುತ್ತದೆ, ಅರಿಶಿನ ಒಂದು ಕಡೆ ಇರುತ್ತದೆ ಎರಡೂ ಸೇರಿದರೆ ಮಂತ್ರಾಕ್ಷತೆಯಾಗುತ್ತದೆ. ನಮ್ಮ ಮನಸ್ಸಿಗೆ ಹಸಿವು, ದುಃಖವಾದಾಗ ನಾವು ನೆಮ್ಮದಿ ಹುಡುಕಲು ದೇವಾಲಯಕ್ಕೆ ಹೋಗುತ್ತೇವೆ” ಎಂದು ಹೇಳಿದರು.
“ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಿಗಲಿ ಎಂದು ನನಗೆ ನಮ್ಮ ಗುರುಗಳು ಹೇಳಿದ್ದಾರೆ. ಯಾವುದೇ ಜಾತಿ, ಧರ್ಮವಾದರೂ ನಾವು ಮಾನವೀಯತೆ ಉಳಿಸಿಕೊಂಡು ಹೋಗಬೇಕು. ನಮ್ಮ ಪ್ರಯತ್ನಗಳು ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ. ಈ ಪ್ರಾರ್ಥನೆಗಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಈ ಭವ್ಯವಾದ ದೇವಾಲಯ ಕಟ್ಟಿದ ಶ್ರೀಗಳ ಪಾದಗಳಿಗೆ ಎಲ್ಲಾ ಭಕ್ತಾದಿಗಳ ಪರವಾಗಿ ಸಾಷ್ಟಾಂಗ ನಮನಗಳನ್ನು ಅರ್ಪಿಸುತ್ತೇನೆ. ದೊಡ್ಡ ಸ್ವಾಮೀಜಿಗಳು ಉಜ್ಜಯನಿಯಲ್ಲಿಯೂ ದೇವಾಲಯ ಅಭಿವೃದ್ಧಿ ಮಾಡಿದ್ದಾರೆ. ಶ್ರೀಗಳು ನ್ಯೂಜೆರ್ಸಿಯಲ್ಲೂ ದೇವಾಲಯ ನಿರ್ಮಾಣ ಮಾಡುತ್ತಿದ್ದಾರೆ. ದೆಹಲಿ, ತಮಿಳುನಾಡು, ತಿರುಪತಿ ಸೇರಿದಂತೆ ಅನೇಕ ಭಾಗಗಳಲ್ಲಿ ಮಠಗಳನ್ನು ವಿಸ್ತರಿಸಲಾಗುತ್ತಿದೆ. ನಮ್ಮ ಮಠಗಳಲ್ಲಿ ಎಲ್ಲಾ ಜಾತಿ, ಧರ್ಮದವರಿಗೂ ಅವಕಾಶ ನೀಡಲಾಗುತ್ತಿದೆ” ಎಂದರು.
“ನಮಗೆ ಕಷ್ಟ ಬಂದಾಗ ಮಾತ್ರವಲ್ಲ, ಸಂತೋಷವಾದಾಗಲೂ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಬೇಕು. ಋಣವನ್ನು ತೀರಿಸಲು ಹೋಗಬೇಕು. ಮಹಾಭಾರತದಲ್ಲಿ ಭೀಷ್ಮನು ಧರ್ಮರಾಯನಿಗೆ ಹೇಳುತ್ತಾನೆ. ಪ್ರತಿ ಮನುಷ್ಯ ತಂದೆ ತಾಯಿ, ದೇವರು, ಗುರುಗಳು ಹಾಗೂ ಸಮಾಜದ ಋಣದಲ್ಲಿ ಹುಟ್ಟುತ್ತಾನೆ. ಈ ಋಣವನ್ನು ನಾವು ಧರ್ಮದಿಂದಲೇ ತೀರಿಸಬೇಕು. ಅರಮನೆ ಹಾಗೂ ಗುರುಮನೆಯನ್ನು ಕಾಪಾಡಬೇಕು. ಅರಮನೆ ಸ್ಥಾನದಲ್ಲಿ ಸರ್ಕಾರ, ಗುರುಮನೆ ಸ್ಥಾನದಲ್ಲಿ ನಮ್ಮ ಮಠ ಇದೆ. ಇವುಗಳನ್ನು ಕಾಪಾಡಿಕೊಂಡು ನಮ್ಮ ಸಮಾಜದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು” ಎಂದು ತಿಳಿಸಿದರು.