ಬೆಂಗಳೂರು: ಜಿಬಿಎ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಾವು ಮುಕ್ತವಾಗಿದ್ದೇವೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಜೆಡಿಎಸ್ ಸಭೆಯನ್ನು ಉದ್ದೇಶಿಸಿದ ಮಾತನಾಡಿದ ಅವರು, ಮುಂಬೈ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಗೆಲುವಾಗಿರುವುದು ಬಿಜೆಪಿ ಜೊತೆಗಿನ ಮೈತ್ರಿ ಫಲ ನೀಡುತ್ತದೆ ಎಂಬುದರ ಲಕ್ಷಣವಾಗಿದೆ. ಒಗ್ಗಟ್ಟಿನಲ್ಲಿ ಬಲವಿದೆ. ಹಾಗಾಗಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಮುಕ್ತವಾಗಿದ್ದೇವೆ ಎಂದರು.
ಕೆಲವು ತಿಂಗಳ ಹಿಂದೆಯಷ್ಟೇ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ ಅವರು, ಜಿಬಿಎ-ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ ವಿಷಯದಲ್ಲಿ ನಾವು ಮುಕ್ತವಾಗಿದ್ದೇವೆ. ನಮ್ಮಿಂದ ಮೈತ್ರಿ ಗೊಂದಲಕ್ಕೆ ಎಡೆ ಮಾಡಿಕೊಡಬಾರದು ಎಂದು ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ಯಾವ ರೀತಿ ರಾಜಕೀಯ ಬೆಳವಣಿಗೆ, ಸ್ಥಳೀಯವಾಗಿ ಬಿಜೆಪಿ ನಾಯಕರ ತೀರ್ಮಾನ ಏನಿದೆ? ಇದೆಲ್ಲವನ್ನು ನೋಡಿಕೊಂಡು ತೀರ್ಮಾನ ಮಾಡ್ತೀವಿ ಎಂದಿದ್ದಾರೆ.
ನಮ್ಮ ಉದ್ದೇಶ, ನಮ್ಮ ಪಕ್ಷದ ಉದ್ದೇಶ ಕಾಂಗ್ರೆಸ್‌ನ ದುರಾಡಳಿತ ರಾಜ್ಯದಿಂದ ಹೋಗಬೇಕು. ಅದಕ್ಕೆ ನಾವು ತಯಾರಿದ್ದೇವೆ. ಮೈತ್ರಿ ವಿಷಯದಲ್ಲಿ ಮುಕ್ತವಾದ ಅವಕಾಶ ಇಟ್ಟುಕೊಂಡಿದ್ದೇವೆ. ಆ ಸಮಯಕ್ಕೆ ಏನಾಗಬೇಕು. ರಾಜ್ಯಕ್ಕೆ ಉತ್ತಮ ಆಡಳಿತ ಕೊಡಲು, ಬೆಂಗಳೂರಿನಲ್ಲಿ ಅನೇಕ ವರ್ಷಗಳಿಂದ ಅಭಿವೃದ್ಧಿ ಸ್ಥಗಿತವಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಬರೀ ಲೂಟಿ ಆಗ್ತಿದೆ. ಕಸ ವಿಲೇವಾರಿ, ಗುಂಡು ಮುಚ್ಚುವುದು, ಯಾವ ಯಾವ ರೀತಿ ಪಕ್ಷಗಳ ನಡವಳಿಕೆ, ಪಕ್ಷದ ಕೊಡುಗೆ ಏನು ಅಂತ ಇಟ್ಟುಕೊಂಡು ಜನರ ಬಳಿ ಹೋಗಬೇಕು. ಮುಂದೆ ಏನ್ ಡೆವಲಪ್ಮೆಂಟ್ ಆಗುತ್ತೋ ನೋಡೋಣ ಎಂದು ಹೇಳಿದ್ದಾರೆ.
ಮುಂಬೈ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮೈತ್ರಿ ಕೂಟ ಗೆಲುವು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಿನ್ನೆಯೇ ಎಕ್ಸಿಟ್ ಪೋಲ್‌ನಲ್ಲಿ ಮುಂಬೈನಲ್ಲಿ ಓಆಂ ಬರುತ್ತೆ ಅಂತ ಮಾಧ್ಯಮಗಳೇ ಹೇಳಿದ್ರಿ. ಅದರಂತೆ ಮುಂಬೈನಲ್ಲಿ ಬಿಜೆಪಿ ಮತ್ತು ಮೈತ್ರಿ ಪಕ್ಷಗಳು ಪ್ರಥಮವಾಗಿ ಅಧಿಕಾರಕ್ಕೆ ಬಂದಿದೆ. ಈ ಗೆಲುವಿಗೆ ಪ್ರಧಾನಿ ಮೋದಿ, ಮಹಾರಾಷ್ಟ್ರ ಸಿಎಂಗೆ ಅಭಿನಂದನೆ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ಫಲಿತಾಂಶ ಪಂಚ ರಾಜ್ಯ ಚುನಾವಣೆ ಮೇಲೆ ಇಂಪ್ಯಾಕ್ಟ್ ಆಗುತ್ತಾ ಎಂಬ ಪ್ರಶ್ನೆಗೆ ಮಹಾರಾಷ್ಟ್ರ ಚುನಾವಣೆ ಬೇರೆ. ಬೇರೆ ರಾಜ್ಯದಲ್ಲಿ ನಡೆಯೋ ಚುನಾವಣೆ ಬೇರೆ. ತಮಿಳುನಾಡು, ಪಶ್ಚಿಮ ಬಂಗಾಳ ಬೇರೆ ಬೇರೆ ಚುನಾವಣೆ ಬೇರೆ ರೀತಿ ನಡೆಯುತ್ತದೆ. ಅಮಿತ್ ಶಾ, ಮೋದಿ ಅವರು ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬರಬೇಕು ಅಂತ ಸಂಘಟನೆಯಲ್ಲಿ ಬಹಳ ಮುಂದೆ ಇದ್ದಾರೆ. ಮುಂದೆ ಏನಾಗುತ್ತೋ ನೋಡೋಣ ಎಂದು ಹೇಳಿದ್ದಾರೆ.


