Wednesday, September 17, 2025
Menu

ನಿಮ್ಮನ್ನು ಸ್ವಾಮಿ ಮಾಡಿದ್ದು ನಾನು, ಸಿಎಂ ಪರ ಬೀದಿಗಿಳಿದ್ರೆ ತಲೆದಂಡ ಹುಷಾರ್‌: ಕಾಗಿನೆಲೆ  ಶ್ರೀಗಳಿಗೆ ಎಚ್.ವಿಶ್ವನಾಥ್  ಬೆದರಿಕೆ? 

ನಿಮ್ಮನ್ನು ಸ್ವಾಮಿ ಮಾಡಿದ್ದು ನಾನು. ಮೊದಲ ಪೀಠಾಧ್ಯಕ್ಷ ಮಾಡಿದ್ದೆ ನಾನು, ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಪರ ಬೀದಿಗೆ ಬರಬಾರದು.ಬಂದರೆ ನಾವು ಸುಮ್ಮನಿರಲ್ಲ. ನಿಮಗೂ ತಲೆ ದಂಡ ಮಾಡಬೇಕಾಗುತ್ತದೆ ಹುಷಾರ್ ಎಂದು  ಎಂದು ಕಾಗಿನೆಲೆ ಪೀಠದ ಶ್ರೀಗಳಿಗೆ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಮಾತು ಕೇಳಿ ಕುರುಬ ಸಮುದಾಯದ ಸ್ವಾಮೀಜಿಗಳು ಬೀದಿಗಿಳಿಯಬಾರದು. ಒಂದು ವೇಳೆ ಬೀದಿಗೆ ಬಂದರೆ ತಲೆದಂಡವಾಗಬೇಕಾಗುತ್ತದೆ ಹುಷಾರ್ ಎಂದಿದ್ದಾರೆ.

ಸಿದ್ದರಾಮಯ್ಯ ಪರ ಬೀದಿಗೆ ಬರಬೇಡಿ. ನೀವೆಲ್ಲ ಸಿದ್ದರಾಮಯ್ಯನ ಕಾಲಾಳುಗಳಲ್ಲ. ಕುರುಬ ಸಮುದಾಯದ ಕಟ್ಟಾಳು ನೀವು. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಪರ ಬೀದಿಗೆ ಬರಬಾರದು. ಬಂದರೆ ನಾವು ಸುಮ್ಮನಿರಲ್ಲ. ನಿಮಗೂ ತಲೆ ದಂಡ ಮಾಡಬೇಕಾಗುತ್ತದೆ ಹುಷಾರ್. ಸಿದ್ದರಾಮಯ್ಯಗೂ ಮಠಕ್ಕೂ ಏನು ಸಂಬಂಧವೇ ಇಲ್ಲ. ಮಠ ಕಟ್ಟಿದ ಮೇಲೆ ಸಿದ್ದರಾಮಯ್ಯ ಬಂದಿದ್ದು. ಸಿದ್ದರಾಮಯ್ಯ ಕುರುಬರಿಗೆ ಶಿಕ್ಷಣನೂ ಕೊಡಲಿಲ್ಲ. ಎಸ್ ಎಸ್ ಎಲ್ ಸಿ ಫೇಲ್ ಆದವರೇ ನಿಮ್ಮ ಜೊತೆ ಇರೋದು. ಕುರುಬರ ಕತೆ ಇಂಗ್ಲಿಷ್ ಸಿನಿಮಾದಂತೆ ಆಗಿದೆ. ಭಾಷೆ ಗೊತ್ತಿಲ್ಲದೇ ಸಿಳ್ಳೆ ಹೊಡೆದಂತೆ ಇರುತ್ತಾರೆ ಎಂದರು.

ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಬಂದಾಗಲೆಲ್ಲಾ ಕುರುಬರ ನೆನಪಾಗುತ್ತದೆ. ಇದೀಗ ಸಿದ್ದರಾಮಯ್ಯಗೆ ಸಂಕಷ್ಟ ಬಂದಿದೆ. ಹಾಗಾಗಿ ಕುರುಬ ಸಮುದಾಯವನ್ನು ಎಸ್ ಟಿ ಸಮುದಾಯಕ್ಕೆ ಸೇರಿಸುವುದಾಗಿ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಮನಸ್ಸು ಮಾಡಿದ್ದರೆ ಎಂದೋ ಈ ಕೆಲಸ ಮಾಡಬಹುದಿತ್ತು. ಕುರುಬ ಸಮುದಾಯಕ್ಕೆ ಯಾವುದೇ ಕೊಡುಗೆ ನೀಡದ ಸಿದ್ದರಾಮಯ್ಯ, ಕುರುಬ ಸಮುದಾಯದ ನಾಯಕರನ್ನು ವ್ಯವಸ್ಥಿತವಾಗಿ ತುಳಿದರು. ಕುರುಬ ನಾಯಕರು ಬೆಳೆಯಲು ಸಿದ್ದರಾಮಯ್ಯ ಬಿಡಲಿಲ್ಲ. ಹಿಂದುಳಿದ ವರ್ಗಗಳ ನಾಯಕ ಎಂದು ಹೇಳುವ ಸಿದ್ದರಾಮಯ್ಯ ಈ ವರ್ಗಕ್ಕೆ ಯಾವುದೇ ಕೊಡುಗೆ ನೀಡಲಿಲ್ಲ, ಹೋರಾಟ ಮಾಡಲಿಲ್ಲ, ಬರೀ ಬೊಗಳೆ ಬಿಟ್ಟುಕೊಂಡು ಓಡಾಡುತ್ತಿದ್ದಾರೆ. ಹಿಂದುಳಿದ ವರ್ಗಗಳ ಬಗ್ಗೆ ಸಿದ್ದರಾಮಯ್ಯಗೆ ಕಾಳಜಿಯಿಲ್ಲ ಎಂದು ಕಿಡಿಕಾರಿದರು.

ನಾಯಕ ಸಮುದಾಯವನ್ನು ಎಸ್.ಟಿ ಸಮುದಾಯಕ್ಕೆ ಸೇರಿಸಿದ್ದು ಎಚ್.ಡಿ.ದೇವೇಗೌಡರು. ಈಗ ಕಾಗಿನೆಲೆ ಮಠಾಧಿಪತಿಗಳನ್ನು ಸಿದ್ದರಾಮಯ್ಯ ಮುಂದಕ್ಕೆ ಬಿಡ್ತಾರೆ. ಆದರೆ ಸ್ವಾಮೀಜಿಗಳನ್ನು ಸಿದ್ದರಾಮಯ್ಯ ಪೀಠಾಧಿಪತಿಯನ್ನಾಗಿ ಮಾಡಿಲ್ಲ. ನಿಮ್ಮನ್ನು ಪೀಠಾಧಿಪತಿ ಮಾಡಿದ್ದು ವಿಶ್ವನಾಥ್. ಮಠಾಧಿಪತಿಗಳೇನು ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ಪಕ್ಷದ ಜೀತದಾಳುಗಳಲ್ಲ. ಕುರುಬರ ಹುಡುಗರಿಗೆ ಸಿದ್ದರಾಮಯ್ಯ ಉತ್ತಮ ಭವಿಷ್ಯ ರೂಪಿಸಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಜಾತಿಗಣತಿಗೆ ಸರ್ಕಾರ ಆದೇಶ ವಿಚಾರ ಕುರಿತು ಪ್ರತಿಕ್ರಿಯಿಸಿದ ಎವ್.ವಿಶ್ವನಾಥ್, ಕಾಂತರಾಜು ಆಯೋಗ ವರದಿ ನೀಟಾಗಿ ಮಾಡಿತ್ತು. ಆದರೆ ಅದರ ಬಿಡುಗಡೆ ಮಾಡಲು ಧೈರ್ಯ ತೋರದ ಹೇಡಿ ಸಿದ್ದರಾಮಯ್ಯ. ಅದನ್ನು 10 ವರ್ಷ ತಲೆಕೆಳೆಗೆ ಇಟ್ಟು ಮಲಗಿದ್ದ ಸಿದ್ದರಾಮಯ್ಯ, ಇದೇ ತೊರಿಸುತ್ತೆ ಸಿದ್ದರಾಮಯ್ಯ ಹಿಂದುಳಿದ ವರ್ಗಗಳಿಗೆ ಏನು ಮಾಡಿಲ್ಲ ಎಂದು ಎಂದು ಹರಿಹಾಯ್ದರು.

ಬಾನು ಮುಷ್ತಾಕ್ ದಸರಾ ಮಹೋತ್ಸವ ಉದ್ಘಾಟನೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿರುವುದು ಸ್ವಾಗತಾರ್ಹ. ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವುದನ್ನು ವಿರೋಧಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೀಗ ನ್ಯಾಯಾಲಯ ಅನುಮತಿ ನೀಡಿದೆ ಇದು ಸ್ವಾಗತಾರ್ಹ ಎಂದು ಎಚ್.ವಿಶ್ವನಾಥ್ ತಿಳಿಸಿದರು.

Related Posts

Leave a Reply

Your email address will not be published. Required fields are marked *