ರಾಜ್ಯದ ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳಿಂದ ಕೇವಲ ಭ್ರಷ್ಟಾಚಾರಕ್ಕೆ ಸೀಮಿತವಾಗಿದ್ದು, ‘ಅಹಿಂದ’ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಈಗ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ದ್ರೋಹ ಬಗೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಗುರುವಾರ ನಡೆದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರವು ಕೇವಲ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದಲ್ಲಿ ಮಗ್ನವಾಗಿದೆ ಎಂದು ಟೀಕಿಸಿದರು.
ಸರ್ಕಾರದ ಹಿಂದುಳಿದ ವರ್ಗಗಳ ನಿರ್ಲಕ್ಷ್ಯ ಮಾಡಿದ್ದು, ನಿರುದ್ಯೋಗ ಸೃಷ್ಟಿಸಿದೆ. ರಾಜ್ಯದ ಸುಮಾರು 1.4 ಲಕ್ಷ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೀಟು ನೀಡಲು ಈ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಮುಖ್ಯಮಂತ್ರಿಗಳು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ರಾಜ್ಯದಲ್ಲಿ 2.85 ಲಕ್ಷ ಹುದ್ದೆಗಳು ಖಾಲಿ ಇವೆ. ಹಿಂದುಳಿದ ವರ್ಗದವರಿಗೆ ಸಿಗಬೇಕಾದ 1.42 ಲಕ್ಷ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿಲ್ಲ. ನ್ಯಾಯಾಲಯದಲ್ಲಿ ಸಮರ್ಪಕ ವಾದ ಮಂಡಿಸದೆ ಸರ್ಕಾರ ಕಾಲಹರಣ ಮಾಡುತ್ತಿದೆ. ಯುವಕರ ಮೇಲೆ ದಮನ: ಉದ್ಯೋಗ ಕೇಳಿದ ಯುವಕರ ಮೇಲೆ ಸರ್ಕಾರ ಲಾಠಿ ಚಾರ್ಜ್ ಮಾಡಿಸುತ್ತಿದೆ ಎಂದು ಕಿಡಿಕಾರಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಔಷಧಗಳು ಸಿಗುತ್ತಿಲ್ಲ. ಕೇಂದ್ರ ಸರ್ಕಾರದ ಜನೌಷಧಿ ಕೇಂದ್ರಗಳನ್ನು ವ್ಯವಸ್ಥಿತವಾಗಿ ಹಳ್ಳ ಹಿಡಿಸಲಾಗುತ್ತಿದೆ. ಬಡ ಜನರ ಆರೋಗ್ಯದ ಜೊತೆ ಸರ್ಕಾರ ಆಟವಾಡುತ್ತಿದೆ. “ಬಿಜೆಪಿ ಸರ್ಕಾರವಿದ್ದಾಗ ಹಿಂದುಳಿದ ವರ್ಗಗಳ ನಿಗಮಗಳಿಗೆ 500 ಕೋಟಿ ರೂ. ನೀಡಲಾಗಿತ್ತು. ಆದರೆ ಪ್ರಸ್ತುತ ಸರ್ಕಾರ ಕೇವಲ 250 ಕೋಟಿ ರೂ. ಘೋಷಿಸಿ, ಅದರಲ್ಲಿ ಕೇವಲ 125 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ,” ಎಂದು ಅವರು ಅಂಕಿಅಂಶ ಸಮೇತ ವಿವರಿಸಿದರು. ಅಲ್ಲದೆ, ಕುರಿ ಮತ್ತು ಮೇಕೆ ಮರಣದ ಪರಿಹಾರ ಧನ ‘ಅನುಗ್ರಹ’ ಯೋಜನೆಯಡಿ 45 ಕೋಟಿ ರೂ. ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ವಿಜಯೇಂದ್ರ ದೂರಿದರು.
ಜನವರಿ ಮತ್ತು ಫೆಬ್ರವರಿ ತಿಂಗಳ 5,000 ಕೋಟಿ ರೂ. ಮೊತ್ತದ ‘ಗೃಹಲಕ್ಷ್ಮಿ’ ಹಣ ಯಾರಿಗೆ ವರ್ಗಾವಣೆಯಾಗಿದೆ ಎಂದು ವಿಜಯೇಂದ್ರ ಸವಾಲು ಹಾಕಿದರು. ವಾಲ್ಮೀಕಿ ನಿಗಮದ ಹಗರಣದ ಮಾದರಿಯಲ್ಲೇ ಈ ಹಣವನ್ನೂ ಲೂಟಿ ಮಾಡಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದರು. ಪ್ರೊ. ಗೋವಿಂದರಾವ್ ವರದಿ ಅನ್ವಯ 72.8% ಹಿಂದುಳಿದ ತಾಲೂಕುಗಳ ಅಭಿವೃದ್ಧಿ ಆಗಿಲ್ಲ. ಸಿದ್ದರಾಮಯ್ಯ ಅವರು ಕೇವಲ ಮೈಸೂರಿಗೆ ಸೀಮಿತವಾಗದೆ ಇಡೀ ರಾಜ್ಯದ ಸಿಎಂ ಆಗಿ ಕೆಲಸ ಮಾಡಲಿ ಎಂದರು.
ನಾಂದೇಡ್-ಬೀದರ್ ನಡುವಿನ 157 ಕಿ.ಮೀ ರೈಲು ಯೋಜನೆಗೆ ಕೇಂದ್ರ ಒಪ್ಪಿಗೆ ನೀಡಿ ಎರಡು ವರ್ಷವಾದರೂ, ರಾಜ್ಯ ಸರ್ಕಾರ ಸಹಮತಿ ನೀಡದೆ ಕಳ್ಳಾಟವಾಡುತ್ತಿದೆಎಂದು ಟೀಕಿಸಿದ ಅವರು, ಒಂದೆಡೆ ಅಭಿವೃದ್ಧಿಗೆ ಹಣವಿಲ್ಲ ಎನ್ನುವ ಸರ್ಕಾರ, ಮತ್ತೊಂದೆಡೆ ಶಾಸಕರನ್ನು ಓಲೈಸಲು ‘ವಿದೇಶ ಪ್ರವಾಸ ಭಾಗ್ಯ’ ಕರುಣಿಸಲು ಹೊರಟಿದೆ ಎಂದು ಲೇವಡಿ ಮಾಡಿದರು.
ಫೆ.19ರಂದು ಬೆಂಗಳೂರಿನ ಗಾಯತ್ರಿ ಗ್ರಾಂಡ್ ಹೋಟೆಲ್ನಲ್ಲಿ ಪಕ್ಷದ ಸಂಘಟನಾತ್ಮಕ ಸಭೆ ನಡೆಯಲಿದ್ದು, ಸಮಾರೋಪ ಸಮಾರಂಭಕ್ಕೆ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್. ಸಂತೋಷ್ ಅವರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.


