Thursday, February 27, 2025
Menu

ಬೆಸ್ಕಾಂನಿಂದ ಕಡಿಮೆ ವಿದ್ಯುತ್ ಬಳಸುವ ಬಿಎಲ್ ಡಿಸಿ ಫ್ಯಾನ್‌ ಲೋಕಾರ್ಪಣೆ

bescom fan

ಬೆಂಗಳೂರು: ಇಂಧನ ದಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಬೆಸ್ಕಾಂ, ಕಡಿಮೆ ವಿದ್ಯುತ್‌ ಬಳಸುವ ಬಿ.ಎಲ್.ಡಿ.ಸಿ. ಫ್ಯಾನ್ ಅನ್ನು ಗುರುವಾರ ಲೋಕಾರ್ಪಣೆಗೊಳಿಸಿದೆ.

ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ), ಕ್ರೆಡಲ್ ಸಹಭಾಗಿತ್ವದಲ್ಲಿ ನಡೆದ ಡಿಸ್ಕಾಂಗಳ ಸಾಮರ್ಥ್ಯಾಭಿವೃದ್ದಿ ಕಾರ್ಯಕ್ರಮದ ಭಾಗವಾಗಿ ಬೆಸ್ಕಾಂನ ಬೇಡಿಕೆ ನಿರ್ವಹಣಾ ವಿಭಾಗದ (ಡಿಎಸ್‌ಎಂ) ವತಿಯಿಂದ ಗುರುವಾರ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿ.ಎಲ್.ಡಿ.ಸಿ. ಸೀಲಿಂಗ್ ಫ್ಯಾನ್ ಅನ್ನು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್‌.ಶಿವಶಂಕರ್‌ ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್‌.ಶಿವಶಂಕರ್‌ “ಬೇಸಿಗೆ ಆರಂಭದಲ್ಲೇ ಬಿ.ಎಲ್‌.ಡಿ.ಸಿ. ಫ್ಯಾನ್‌ಗಳನ್ನು ಬಿಡುಗಡೆ ಮಾಡಿ, ಬಳಕೆಗೆ ಗ್ರಾಹಕರನ್ನು ಉತ್ತೇಜಿಸಲಾಗುತ್ತಿದೆ. ಸಾಮಾನ್ಯ ಫ್ಯಾನ್‌ಗಳಿಗಿಂತ ಅತಿ ಕಡಿಮೆ ವಿದ್ಯುತ್ ಬಳಸಿಕೊಳ್ಳುವಂತೆ ಈ ಫ್ಯಾನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಒಟ್ಟಾರೆ ವಿದ್ಯುತ್ ಬೇಡಿಕೆ ಕಡಿತಗೊಳಿಸುವ ನಮ್ಮ ಈ ಪ್ರಯತ್ನ ಗ್ರಾಹಕರ ವಿದ್ಯುತ್ ವೆಚ್ಚವನ್ನೂ ಕಡಿಮೆ ಮಾಡಲಿದೆ. ಸುಸ್ಥಿರ ಹಾಗೂ ಇಂಧನ ದಕ್ಷತೆಯ ಭವಿಷ್ಯಕ್ಕೆ ಇದು ಮಹತ್ವದ ಹೆಜ್ಜೆಯಾಗಿದೆ,” ಎಂದು ಹೇಳಿದರು.

“ಇಂಧನ ದಕ್ಷತೆಯೆಡೆಗಿನ ನಮ್ಮ ಪ್ರಯತ್ನವು ಪಾಲುದಾರರ ಸಹಕಾರವಿಲ್ಲದೇ ಸಾಧ್ಯವಾಗುತ್ತಿರಲಿಲ್ಲ. ಆ ನಿಟ್ಟಿನಲ್ಲಿ ಬಿಇಇ, ಕ್ರೆಡಲ್, ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್‌ಸಿ) ಹಾಗೂ ಇನ್ನಿತರ ಪಾಲುದಾರರ ಪ್ರೋತ್ಸಾಹಕ್ಕೆ ಧನ್ಯವಾದ. ವಿದ್ಯುತ್ ಬಳಕೆಯಲ್ಲಿ ಜಾಗೃತಿ ಹಾಗೂ ಸುಸ್ಥಿರ ನಾಳೆಗಾಗಿ, ನಾವು ಒಂದಾಗಿ ನಡೆಯಬೇಕಿದೆ,” ಎಂದು ಡಾ. ಎನ್‌. ಶಿವಶಂಕರ್‌ ಕರೆ ನೀಡಿದರು.

ಕ್ರೆಡಲ್ ವ್ಯವಸ್ಥಾಪಕ ನಿರ್ದೆಶಕ ಕೆ.ಪಿ.ರುದ್ರಪ್ಪಯ್ಯ ಮಾತನಾಡಿ, “ಒಂದು ಯೂನಿಟ್ ವಿದ್ಯುತ್‌ ಉಳಿಸಿದರೆ, ಎರಡು ಯೂನಿಟ್ ವಿದ್ಯುತ್‌ ಉತ್ಪಾದಿಸಿದಂತೆ. ವಿದ್ಯುತ್ ಉತ್ಪಾದನೆ ಎಷ್ಟು ಮುಖ್ಯವೋ, ಅದನ್ನು ಸಂರಕ್ಷಿಸುವುದೂ ಅಷ್ಟೇ ಮುಖ್ಯವಾಗುತ್ತದೆ. ದೇಶದಲ್ಲಿ ಮೊದಲ ಬಾರಿಗೆ ವಿದ್ಯುತ್ ಸಂರಕ್ಷಣೆ ಮತ್ತು ದಕ್ಷತೆ ನೀತಿ-2022-27 ಜಾರಿಗೊಳಿಸಿದ ಹೆಮ್ಮೆ ಕರ್ನಾಟಕದ್ದು . ಈ ನೀತಿಯು 744 ಬಿಲಿಯನ್ ಕಿಲೋ ವ್ಯಾಟ್ ಅವರ್ ವಿದ್ಯುತ್ ಉಳಿತಾಯ ಜತೆಗೆ 6 ಲಕ್ಷ ಟನ್ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ತಡೆಯುವ ಗುರಿ ಹೊಂದಿದೆ,” ಎಂದು ತಿಳಿಸಿದರು.

“ಇಂಧನ ದಕ್ಷತೆ ಹಾಗೂ ಸಂರಕ್ಷಣೆಯ ಗುರಿ ತಲುಪಲು ವಿವಿಧ ವಲಯಗಳಿಗೆ ಗುರಿಗಳನ್ನು ನೀಡಲಾಗಿತ್ತು. ಈ ನಿಟ್ಟಿನಲ್ಲಿ ಬೆಸ್ಕಾಂ ಸಾಧನೆ ಮಹತ್ವದ್ದಾಗಿದೆ. ಬಿ.ಎಲ್‍.‍‍‍ಡಿ.ಸಿ. ಫ್ಯಾನ್‌ಗಳ ಬಳಕೆ ಹೆಚ್ಚಬೇಕಿದ್ದು, ವಿದ್ಯುತ್ ಉಳಿತಾಯ ಪ್ರಯತ್ನಗಳು ನಮ್ಮಿಂದಲೇ ಆರಂಭವಾಗಲಿ,” ಎಂದರು.

ಪಿ.ಡ್ಲ್ಯೂ.ಸಿ. ಭಾರತದ ಕ್ಲೀನ್ ಎನರ್ಜಿ ವಿಭಾಗದ ಮುಖ್ಯಸ್ಥರಾದ ರಾಜೀವ್ ರಲ್ಹಾನ್ ಮಾತನಾಡಿ, ” ಸದ್ಯ ಬಳಕೆಯಲ್ಲಿರುವ ಹಳೆಯ ತಂತ್ರಜ್ಞಾನದ ಫ್ಯಾನ್‌ಗಳಿಗೆ ಹೋಲಿಸಿದರೆ ಬಿ.ಎಲ್.ಡಿ.ಸಿ. ಫ್ಯಾನ್ ಬಳಕೆಯಿಂದ ಶೇಕಡ 50ರಷ್ಟು ವಿದ್ಯುತ್ ಬಳಕೆ ಕಡಿಮೆಗೊಳಿಸಬಹುದಾಗಿದೆ. ಬಿ.ಎಲ್.ಡಿ.ಸಿ. ಫ್ಯಾನ್ ಬಳಕೆ ಉತ್ತೇಜಿಸುತ್ತಿರುವ ಸರ್ಕಾರದ ಜತೆ ಸಹಕರಿಸಲು ಹೆಮ್ಮೆಯಾಗುತ್ತಿದೆ,” ಎಂದು ಹೇಳಿದರು.

ಇಇಎಸ್‌ಎಲ್ ರಾಜ್ಯ ಮುಖ್ಯಸ್ಥರಾದ ದೀಪಕ್ ಸಹನಿ, ಬೆಸ್ಕಾಂ ತಾಂತ್ರಿಕ ನಿರ್ದೇಶಕ ಹೆಚ್‌.ಜೆ. ರಮೇಶ್‌, ಬೆಸ್ಕಾಂ ಡಿಎಸ್‌ಎಂ ಪ್ರಧಾನ ವ್ಯವಸ್ಥಾಪಕರಾದ ರಮೇಶ್ ವಿ.ಎಸ್., ಪಿಎಂಎಸ್ ನಿರ್ದೇಶಕರಾದ ಅಮೇಯ ಸುಬೋಧ್ ಉದ್ಘಾಂವ್ಕರ್ ಸೇರಿದಂತೆ ಬೆಸ್ಕಾಂನ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಬಿ.ಎಲ್‌.ಡಿ.ಸಿ. ಸೀಲಿಗ್‌ ಫ್ಯಾನ್‌ ಖರೀದಿ ಹೇಗೆ?

ಹೆಚ್ಎಸ್ಆರ್‌ ಲೇಔಟ್‌ನಲ್ಲಿರುವ ಬೆಸ್ಕಾಂನ ಸೆಂಟರ್ ಆಫ್ ಎಕ್ಸಲೆನ್ಸ್ ಕಚೇರಿ ಮತ್ತು ಬೆಸ್ಕಾಂ ಅಧಿಕೃತ ಜಾಲತಾಣದಲ್ಲಿನ ಇಇಎಸ್‌ಎಲ್‌ ಲಿಂಕ್ (https://eeslmart.in/fan?affiliateid=13285) (website link: eeslmart.in) ಮೇಲೆ ಕ್ಲಿಕ್ ಮಾಡುವುದರ ಮೂಲಕ ಆನ್‌ಲೈನ್‌ನಲ್ಲಿ ಫ್ಯಾನ್ ಖರೀದಿಸಬಹುದಾಗಿದೆ. 5 ಸ್ಟಾರ್ ಪ್ರಮಾಣೀಕೃತ ಬಿ.ಎಲ್.ಡಿ.ಸಿ. ಸೀಲಿಂಗ್ ಫ್ಯಾನ್ ಬೆಲೆ 2,699 ರೂ. ಇದೆ.

Related Posts

Leave a Reply

Your email address will not be published. Required fields are marked *