ಬೆಂಗಳೂರು: 2027ರ ಡಿಸೆಂಬರ್ ವೇಳೆಗೆ ಬೆಂಗಳೂರು 175 ಕಿ.ಮೀ ಮೆಟ್ರೋ ಜಾಲ ಹೊಂದಲಿದೆ ಎಂದು ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮೆಟ್ರೋ ಕಾಮಗಾರಿಗಳ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐಟಿ ನಗರವು ಪ್ರಸ್ತುತ 96 ಕಿ.ಮೀ ಮೆಟ್ರೋ ಜಾಲ ಹೊಂದಿದ್ದು, ಮುಂದಿನ ಎರಡು ವರ್ಷಗಳಲ್ಲಿ ಇನ್ನೂ 80 ಕಿ.ಮೀ ಅನ್ನು ಇದಕ್ಕೆ ಸೇರಿಸಲಾಗುವುದು. ಡಿಸೆಂಬರ್ 26ರ ವೇಳೆಗೆ 41 ಕಿ.ಮೀ ಜಾಲ ಮೆಟ್ರೋಗೆ ಸೇರ್ಪಡೆಯಾಗಲಿದೆ ಮತ್ತು 2027ರ ಡಿಸೆಂಬರ್ ವೇಳೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮೆಟ್ರೋ ಮಾರ್ಗವೂ ಸೇರಿದಂತೆ 38 ಕಿ.ಮೀ ಮಾರ್ಗಗಳು ಸೇರ್ಪಡೆಯಾಗಲಿವೆ ಎಂದರು.
ಬೆಂಗಳೂರು ಮೆಟ್ರೋ ರೈಲು ನಿಗಮವು ತಿಂಗಳೊಳಗೆ ಹಂತ-3ರ ಅಡಿ 100 ಕಿ.ಮೀ. ಮೆಟ್ರೋ ಮಾರ್ಗಗಳಿಗೆ 25,000 ಕೋಟಿ ರೂ.ಗಳ ಟೆಂಡರ್ ಕರೆಯಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದರಲ್ಲಿ ಮೆಟ್ರೋ ಮತ್ತು ರಸ್ತೆ ಕಾರಿಡಾರ್‌ಗಳನ್ನು ಹೊಂದಿರುವ 42 ಕಿ.ಮೀ. ಡಬಲ್ ಡೆಕ್ಕರ್ ಕಾರಿಡಾರ್‌ಗಳು ಸೇರಿವೆ. ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಉದ್ದದ ಡಬಲ್ ಡೆಕ್ಕರ್ ಕಾರಿಡಾರ್ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ, 24 ಕಿ.ಮೀ ಉದ್ದದ ಹಳದಿ ಮೆಟ್ರೋ ಮಾರ್ಗವನ್ನು ಕಾರ್ಯಾರಂಭಿಸಲಾಗಿದೆ. ಈ ಮಾರ್ಗದಲ್ಲಿ ಸುಮಾರು ಒಂದು ಲಕ್ಷ ಜನರು ಪ್ರಯಾಣಿಸುತ್ತಿದ್ದಾರೆ. ಇದರಿಂದಾಗಿ ಎಲೆಕ್ಟ್ರಾನಿಕ್ ಸಿಟಿಯ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಶೇ.30 ರಷ್ಟು ಕಡಿಮೆಯಾಗುತ್ತದೆ ಎಂದು ಹೇಳಿದರು.
ನೆಲಮಂಗಲ, ಮಾಗಡಿ, ತಾವರಕೆರೆ, ಮಾಗಡಿ, ಹೊಸಕೋಟೆ ಮತ್ತು ಬಿಡದಿಯನ್ನು ಮೆಟ್ರೋ ಮಾರ್ಗಗಳೊಂದಿಗೆ ಸಂಪರ್ಕಿಸಲು ಯೋಜಿಸಲಾಗುತ್ತಿದೆ. ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲು ಭೂಮಿ ಬಳಕೆ ಮಾಡಿಕೊಳ್ಳಲು ಮತ್ತು ಕರ್ಮಷಿಯಲ್ ಆಗಿ ಅಭಿವೃದ್ಧಿಪಡಿಸಲು ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದರು.
ಮೆಟ್ರೋ ಬಳಕೆ ಹೆಚ್ಚುತ್ತಿರುವುದರ ಮೆಟ್ರೋ ನಿಲ್ದಾಣಗಳಲ್ಲಿ ದ್ವಿಚಕ್ರ ವಾಹನಗಳು ಮತ್ತು ಕಾರುಗಳಿಗೆ ಬಹು ಹಂತದ ಪಾರ್ಕಿಂಗ್ ಸೌಲಭ್ಯಗಳ ಅಗತ್ಯತೆ ಒತ್ತಿ ಹೇಳಿದ ಅವರು, ನ್ಯಾಯಾಲಯದ ಪ್ರಕರಣಗಳು ಮತ್ತು ಭಾರಿ ಸಂಚಾರ ದಟ್ಟಣೆಯಿಂದಾಗಿ ಕೆಲವು ಸ್ಥಳಗಳಲ್ಲಿ ಭೂಸ್ವಾಧೀನಕ್ಕೆ ತೊಂದರೆಗಳಿವೆ ಎಂದು ಹೇಳಿದರು.
ಸರ್ಕಾರವು ಒಪ್ಪಿತ ವೆಚ್ಚ ಹಂಚಿಕೆ ಮಾದರಿಗೆ ಬದ್ಧವಾಗಿರುತ್ತದೆ. ನಾವು ಬದ್ಧ ಶೇಕಡಾವಾರು ಪ್ರಮಾಣವನ್ನು ಮೀರಿ ಹೋಗುವುದಿಲ್ಲ. ಗುತ್ತಿಗೆದಾರರು ನಿರ್ಮಾಣ, ನಿರ್ವಹಣೆ ಮತ್ತು ವರ್ಗಾವಣೆ ಮಾದರಿಯಡಿ ಹೂಡಿಕೆ ಮಾಡಬೇಕಾಗುತ್ತದೆ. ಪಾರದರ್ಶಕತೆ ಮತ್ತು ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮುಂಬೈ ಸೇರಿದಂತೆ ಇತರ ನಗರಗಳಿಗೆ ಹೋಲಿಸಿದರೆ ಮೆಟ್ರೋ ಯೋಜನಾ ವೆಚ್ಚ ಎಷ್ಟಾಗುತ್ತದೆ ಪರಿಶೀಲಿಸುವುದಾಗಿ ತಿಳಿಸಿದರು.


