ಜಗತ್ತಿನ ಅತ್ಯಂತ ಹೆಚ್ಚು ವಾಹನ ದಟ್ಟಣೆಗಳ ಪಟ್ಟಿಯಲ್ಲಿ ಸಿಲಿಕಾನ್ ಸಿಟಿ ಮತ್ತೊಮ್ಮೆ ಎರಡನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಮೆಕ್ಸಿಕೊ ಮೊದಲ ಸ್ಥಾನ ಪಡೆದಿದೆ.
ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ -2025 ಸಂಸ್ಥೆ ಜಗತ್ತಿನಾದ್ಯಂತ 500 ನಗರಗಳ ಸಮೀಕ್ಷೆ ನಡೆಸಿದ್ದು, 34 ನಗರದೊಳಗೆ ಮಾತ್ರ ಅತ್ಯಂತ ವೇಗವಾಗಿ ವಾಹನ ಸಂಚಾರ ಮಾಡಬಹುದಾಗಿದೆ.
ಬೆಂಗಳೂರು ನಗರದಲ್ಲಿ 1 ಕಿ.ಮೀ. ವಾಹನದಲ್ಲಿ ಸಂಚರಿಸಲು ಕನಿಷ್ಠ 3 ನಿಮಿಷ 37 ಸೆಕೆಂಡ್ ಸಮಯ ತಗಲುತ್ತದೆ. 15 ನಿಮಿಷದಲ್ಲಿ ಗರಿಷ್ಠ 4.2 ಕಿ.ಮೀ. ದೂರ ಸಾಗಬಹುದಾಗಿದೆ. ಅಂದರೆ ಇದರಿಂದ ವಾಹನ ಸವಾರರ ವಾರ್ಷಿಕ 160 ಗಂಟೆಗಳು ಸಂಚಾರ ದಟ್ಟಣೆಯಲ್ಲಿ ಸಮಯ ವ್ಯರ್ಥವಾಗುತ್ತದೆ. ಅಲ್ಲದೇ ಇದರಿಂದ ವಾರ್ಷಿಕ 17,000 ಸಾವಿರ ರೂ. ಕಳೆದುಕೊಳ್ಳುತ್ತಿದ್ದಾರೆ.
ಬೆಂಗಳೂರಿನಲ್ಲಿ 10 ಕಿ.ಮೀ ಪ್ರಯಾಣಿಸಲು ತೆಗೆದುಕೊಳ್ಳುವ ಸರಾಸರಿ ಸಮಯ 36 ನಿಮಿಷ ಆಗಿದೆ. ಡಬ್ಲಿನ್ (ಐರ್ಲೆಂಡ್), ಲಾಡ್ಜ್ (ಪೋಲೆಂಡ್) ಮತ್ತು ಪುಣೆ (ಭಾರತ) ಅತ್ಯಂತ ವಾಹನ ದಟ್ಟಣೆ ಹೊಂದಿರುವ ಅಗ್ರ 5 ನಗರಗಳಲ್ಲಿ ಸ್ಥಾನ ಪಡೆದ ಇತರೆ ನಗರಗಳಾಗಿವೆ.
ಬೆಂಗಳೂರಿನಲ್ಲಿ ಸರಾಸರಿ ದಟ್ಟಣೆ ಶೇಕಡಾ 74.4 ರಷ್ಟಿದೆ. ಇದು 2024 ಕ್ಕೆ ಹೋಲಿಸಿದರೆ ಶೇಕಡಾ 1.7 ರಷ್ಟು ಹೆಚ್ಚಳವಾಗಿದೆ. ವಾಹನ ಚಾಲಕರು 15 ನಿಮಿಷಗಳಲ್ಲಿ ಸರಾಸರಿ 4.2 ಕಿ.ಮೀ ದೂರ ಕ್ರಮಿಸಿದ್ದಾರೆ. 10 ಕಿಮೀ ಕ್ರಮಿಸಲು ತೆಗೆದುಕೊಂಡ ಸರಾಸರಿ ಸಮಯವು 36 ನಿಮಿಷ 9 ಸೆಕೆಂಡ್ ಆಗಿದೆ. ಗರಿಷ್ಠ ಸಮಯದಲ್ಲಿ ಸರಾಸರಿ ವೇಗವು ಗಂಟೆಗೆ 13.9 ಕಿ.ಮೀ.ಗೆ ಇಳಿದಿದೆ ಎಂದು ವರದಿ ತಿಳಿಸಿದೆ.
ಮೇ 17, 2025ರಂದು ಬೆಂಗಳೂರಿನಲ್ಲಿ ಸಂಚಾರ ಪರಿಸ್ಥಿತಿ ವಿಶೇಷವಾಗಿ ಕೆಟ್ಟದಾಗಿದ್ದು, ಸರಾಸರಿ ದಟ್ಟಣೆಯ ಮಟ್ಟವು ಶೇಕಡಾ 101 ರಷ್ಟಿದೆ ಎಂದು ವರದಿ ತಿಳಿಸಿದೆ. ಸಂಜೆ 6 ಗಂಟೆಗೆ ವಾಹನ ಚಾಲಕರು 15 ನಿಮಿಷಗಳಲ್ಲಿ ಕೇವಲ 2.5 ಕಿ.ಮೀ ಪ್ರಯಾಣಿಸಿದರು.
ಮುಂಬೈ (18), ದೆಹಲಿ (23), ಕೋಲ್ಕತ್ತಾ (29), ಜೈಪುರ (30), ಚೆನ್ನೈ (32) ಮತ್ತು ಹೈದರಾಬಾದ್ (47) ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಹೈದರಾಬಾದ್ನಲ್ಲಿ ಸರಾಸರಿ ವೇಗ ಗಂಟೆಗೆ 18.4 ಕಿಲೋಮೀಟರ್ ಎಂದು ವರದಿ ತಿಳಿಸಿದೆ.
ವಿಶ್ವದಲ್ಲಿ ಸುಮಾರು 500 ನಗರಗಳಲ್ಲಿ 3.65 ಟ್ರಿಲಿಯನ್ ಕಿಲೋಮೀಟರ್ಗಳಿಗಿಂತ ಹೆಚ್ಚಿನ ಪ್ರಯಾಣದ ಡೇಟಾವನ್ನು ಆಧರಿಸಿ ವರದಿಯನ್ನು ರಚಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.


