Wednesday, November 05, 2025
Menu

ವಿಜ್ಞಾನ, ಅನ್ವೇಷಣೆ, ಮಾನವ ಸಂಪನ್ಮೂಲ, ವಿಫುಲ ಅವಕಾಶದ ಸುರಕ್ಷಿತ ಜಾಗ ಬೆಂಗಳೂರು: ಡಿಕೆ ಶಿವಕುಮಾರ್‌

“ಕರ್ನಾಟಕ ರಾಜ್ಯವು ಜ್ಞಾನ, ಸಹಕಾರ, ಚರ್ಚೆ ಮತ್ತು ಸಂಯೋಜನೆಗೆ ಮುಕ್ತ ಹಾಗೂ ಸೂಕ್ತ ಸ್ಥಳವಾಗಿದೆ. ನಮ್ಮ ಮೇಲೆ ವಿಶ್ವಾಸ ಇಟ್ಟು ಬಂದಿರುವುದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದ” ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದರು.

ಬೆಂಗಳೂರಿನ  ಖಾಸಗಿ ಹೋಟೆಲ್ ನಲ್ಲಿ ನಡೆದ ‘ಬೆಂಗಳೂರು ಕೌಶಲ್ಯ ಶೃಂಗಸಭೆ 2025’ ಅನ್ನು ಉದ್ದೇಶಿಸಿ  ಮಾತನಾಡಿದರು. “ನಿಮ್ಮ ಶ್ರಮ, ಜ್ಞಾನ ಕರ್ನಾಟಕದ ಬೆಳವಣಿಗೆಗೆ ಸಹಕಾರಿಯಾಗಬೇಕು. ನಾವು ನಿಮ್ಮ ‌ಮೇಲೆ ನಂಬಿಕೆಯನ್ನಿಟ್ಟಿದ್ದೇವೆ. ಯಾರ ಜ್ಞಾನವೂ‌ ಕೀಳಲ್ಲ ಹಾಗೂ ಮೇಲಲ್ಲ. ಉದಾಹರಣೆಗೆ ಹೇಳುವುದಾದರೆ ಬಡಗಿಯ ಕೌಶಲ್ಯವೇ ಬೇರೆ, ಕ್ಷೌರಿಕನ ಕೌಶಲ್ಯವೇ ಬೇರೆ. ಇಲ್ಲಿ ಎಲ್ಲ ಕೌಶಲ್ಯಕ್ಕೂ ಗೌರವ, ಬೆಲೆ ಇದೆ” ಎಂದು ಹೇಳಿದರು.

“ಭಾರತವನ್ನು ಬೆಂಗಳೂರಿನ ಮುಖಾಂತರ ನೋಡಲಾಗುತ್ತಿದೆ. ಪ್ರತಿವರ್ಷ ಕರ್ನಾಟಕದಿಂದ ಅಂದಾಜು 1.60 ಲಕ್ಷ ಎಂಜಿನಿಯರ್ ಗಳು ಕಾಲೇಜಿನಿಂದ ಹೊರ ಬರುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ 270 ಕ್ಕೂ ಹೆಚ್ಚು ಎಂಜಿನಿಯರಿಂಗ್, 1160 ಐಟಿಐ ಕಾಲೇಜುಗಳಿವೆ. 1200 ಕ್ಕೂ ಹೆಚ್ಚು ನರ್ಸಿಗ್ ಹಾಗೂ ಪ್ಯಾರಾಮೆಡಿಕಲ್ ಕಾಲೇಜುಗಳಿವೆ. ಆರೋಗ್ಯ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲೂ ಮುಂದಿದ್ದೇವೆ. ಇಲ್ಲಿನ ಹವಾಮಾನ ಅತ್ಯುತ್ತಮವಾಗಿದೆ” ಎಂದರು.

ಬೆಂಗಳೂರು ಸುರಕ್ಷಿತ ಜಾಗ

“ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಐಟಿ ಎಂಜಿನಿಯರ್ ಗಳಿದ್ದರೆ ಬೆಂಗಳೂರಿನಲ್ಲಿ 25 ಲಕ್ಷ ಐಟಿ ವೃತ್ತಿಪರರಿದ್ದಾರೆ. ಅಮೇರಿಕಾದಲ್ಲಿ 9/11 ಟ್ವಿನ್ ಟವರ್ ದಾಳಿ ನಂತರ ಇಡೀ ಪ್ರಪಂಚದಲ್ಲಿಯೇ ಬೆಂಗಳೂರು ಸುರಕ್ಷಿತ ಜಾಗವೆಂದು ಗುರುತಿಸಲ್ಪಟ್ಟಿತು. ಬೆಂಗಳೂರು ಜ್ಞಾನ, ವಿಜ್ಞಾನ, ಅನ್ವೇಷಣೆ ಮತ್ತು ಮಾನವ ಸಂಪನ್ಮೂಲದ ಜೊತೆಗೆ ವಿಫುಲ ಅವಕಾಶವಿರುವ ಜಾಗವಾಗಿದೆ” ಎಂದು ಹೇಳಿದರು.

“ಈ ಶೃಂಗಸಭೆಯ ಮೂಲಕ ಹೊಸ ಹಾಗೂ ವಿನೂತನ ವಿಚಾರಗಳು ಹೊರಬರಲಿ ಎಂದು ಆಶಿಸುತ್ತೇನೆ. ಚರ್ಚೆ ‌ಹಾಗೂ ಜ್ಞಾನದ ವಿನಿಮಯದ ಮೂಲಕವೇ ನಾವು ಕಟ್ಟಬೇಕಿದೆ. ವಿನಿಮಯದಿಂದಲೇ ಪ್ರಗತಿ. ನೀವು ಉದ್ಯೋಗ ಹುಡುಕುವವರು ಆಗಬಾರದು. ಉದ್ಯೋಗ ಸೃಷ್ಟಿಸುವವರಾಗಬೇಕಿದೆ” ಎಂದರು.

“ಈ ಶೃಂಗಸಭೆಯಲ್ಲಿ ಎಐ ತಂತ್ರಜ್ಞಾನದ ಮೂಲಕ ಕರ್ನಾಟಕದ ನಿರ್ಮಾಣ, ಸುಸ್ಥಿರ ಭವಿಷ್ಯಕ್ಕೆ ಕೌಶಲ್ಯ ಅಭಿವೃದ್ಧಿ, ಪ್ರಸ್ತುತತೆ ಜೊತೆಗೆ ಭವಿಷ್ಯದ ಕೌಶಲ್ಯಗಳ ಬೆಳವಣಿಗೆಯಂತಹ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದ್ದು, ನಿಮ್ಮ ಜ್ಞಾನವನ್ನು ಹಂಚಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ. ಜೊತೆಗೂಡುವುದು ಆರಂಭ, ಜೊತೆಗೂಡಿ ಯೋಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂಬುದರ ಮೇಲೆ ನಮ್ಮ ಸರ್ಕಾರ ನಂಬಿಕೆ ಇಟ್ಟಿದೆ” ಎಂದು ತಿಳಿಸಿದರು.

“ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲರು ವೈದ್ಯರು. ಆದರೆ ವಿಶೇಷ ಆಸಕ್ತಿ ವಹಿಸಿಕೊಂಡು ಕೌಶಲ್ಯಾಭಿವೃದ್ದಿ ಇಲಾಖೆ ಜವಾಬ್ದಾರಿ ತೆಗೆದುಕೊಂಡು ಹೊಸ ರೂಪ ನೀಡುತ್ತಿದ್ದಾರೆ. ಸಮಾಜಕ್ಕೆ, ನಮ್ಮ ರಾಜ್ಯಕ್ಕೆ ಹಾಗೂ ದೇಶಕ್ಕೆ ಅಗತ್ಯವಾಗಿ ಬೇಕಾಗುರುವುದು ಏನು ಎಂದು ಅರಿತು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ” ಎಂದು ಅಭಿನಂಧಿಸಿದರು.

Related Posts

Leave a Reply

Your email address will not be published. Required fields are marked *