ಭಾರೀ ಅವ್ಯವಹಾರ ನಡೆಯುತ್ತಿರುವ ಹಿನ್ನೆಲೆ ಬೆಂಗಳೂರಿನ ಪ್ರಸಿದ್ಧ ಗಾಳಿ ಆಂಜನೇಯ ದೇವಸ್ಥಾನವನ್ನು ಸರಕಾರದ ಸುಪರ್ದಿಗೆ ಪಡೆಯುವ ಮಹತ್ವದ ಆದೇಶವನ್ನು ಕರ್ನಾಟಕ ಮುಜರಾಯಿ ಇಲಾಖೆ ಹೊರಡಿಸಿದೆ.
ಇಲಾಖೆಯ ಈ ಆದೇಶದ ಅನುಸಾರ ಇನ್ಮುಂದೆ ದೇವಸ್ಥಾನದ ಸಂಪೂರ್ಣ ಆಡಳಿತ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಲಿದೆ. ಸರಕಾರವೇ ಇನ್ಮುಂದೆ ದೇವಸ್ಥಾನದ ಆಗುಹೋಗುಗಳನ್ನು ನೋಡಿಕೊಳ್ಳಲಿದೆ. ದೇವಸ್ಥಾನದ ಆಡಳಿತ ಮಂಡಳಿ ನಡೆಸಿದ ಅಕ್ರಮ ಚಟುವಟಿಕೆಗಳು ಮತ್ತು ದುರಾಡಳಿತದ ಹಿನ್ನೆಲೆಯಲ್ಲಿ ಸರಕಾರ ಈ ತೀರ್ಮಾನ ತೆಗೆದುಕೊಂಡಿದೆ.
ದೇವಸ್ಥಾನದಲ್ಲಿ ನಡೆದ ಕೆಲವು ಘಟನೆಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ಆಯುಕ್ತರು ತನಿಖೆ ನಡೆಸಿದರು.
ತನಿಖೆ ವೇಳೆ ದೇವಸ್ಥಾನಕ್ಕೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದ್ದರೂ ವರ್ಷಾಂತ್ಯದಲ್ಲಿ ಯಾವುದೇ ಮೊತ್ತ ದೇವಸ್ಥಾನದ ಖಾತೆಯಲ್ಲಿ ಉಳಿಯುತ್ತಿಲ್ಲ ಎನ್ನಲಾಗಿದೆ. 25 ವರ್ಷಗಳಿಂದ ದೇವಸ್ಥಾನದ ವಿಚಾರಕ್ಕೆ ಸಂಬಂಧಿಸಿ ಯಾವುದೇ ದಾಖಲೆಗಳನ್ನು ಇಟ್ಟಿಲ್ಲ. ಈ ಎಲ್ಲ ಕಾರಣಕ್ಕೆ ಸರಕಾರ ಇಂದು ದೇವಸ್ಥಾನವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆಯುವ ಆದೇಶ ಹೊರಡಿಸಿದೆ.