ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಕೋ-ಲಿವಿಂಗ್ ಪಿಜಿಯಲ್ಲಿ ಲೈಂಗಿಕ ಕ್ರಿಯೆಗೆ ಒಪ್ಪದ ಒಬ್ಬ ಯುವತಿಯನ್ನು ಅದೇ ಪಿಜಿಯಲ್ಲಿ ವಾಸವಿರುವ ಯುವಕ ಚಾಕುವಿನಿಂದ ಇರಿದು ಗಾಯಗೊಳಿಸಿದ್ದು, ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಕೋ-ಲಿವಿಂಗ್ ಪಿಜಿಯಲ್ಲಿರುವ ಬಾಬು ಎಂಬ ಟೆಕ್ಕಿ ಆರೋಪಿ. ಆತನಿಗೆ ಮದುವೆಯಾಗಿ ಮಗುವಿದ್ದರೂ ಪಿಜಿಯಲ್ಲಿ ಒಬ್ಬನೇ ವಾಸವಿದ್ದಾನೆ. ಎರಡು ತಿಂಗಳ ಹಿಂದೆ ಪಿಜಿಗೆ ಬಂದ ಯುವತಿ ಆತನಿಗೆ ಪರಿಚಯವಾಗಿದ್ದಳು. ಆಕೆಯ ಮೊಬೈಲ್ ನಂಬರ್ ಪಡೆದಿದ್ದ ಆರೋಪಿಯು ಸ್ನೇಹ ಆರಂಭಿಸಿ, ಯುವತಿಯ ಮೇಲೆ ಅಧಿಕಾರ ಚಲಾಯಿಸುವ ವರ್ತನೆ ತೋರಿಸುತ್ತಿದ್ದ ಎಂದು ಹೇಳಲಾಗಿದೆ.
ಮೂರು ದಿನಗಳ ಹಿಂದೆ ಆರೋಪಿಯು ಯುವತಿಯನ್ನು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ, ಆಕೆ ಒಪ್ಪದೆ ಹೋದಾಗ ಆಕೆಯ ಖಾಸಗಿ ಪೋಟೋಗಳು ತನ್ನ ಬಳಿ ಇರುವುದಾಗಿ ಬೆದರಿಸಿದ್ದಾನೆ. ತನಗೆ 70,000 ರೂಪಾಯಿ ನೀಡುವಂತೆಯೂ ಒತ್ತಾಯಿಸಿದ್ದ. ಯುವತಿಯ ಮೊಬೈಲ್ ಫೋನ್ ಕಿತ್ತುಕೊಂಡು ಆಕೆಯ ಖಾತೆಯಿಂದ 14,000 ರೂಪಾಯಿ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಯುವತಿಯು ಸ್ನೇಹಿತರಿಂದ ಸಾಲ ಪಡೆದು ಹಣ ನೀಡುವುದಾಗಿ ತಿಳಿಸಿದರೂ ಆರೋಪಿ ಬಾಬು ಗಲಾಟೆ ಮುಂದುವರಿಸಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಹೀಗೆ ಗಲಾಟೆ ಜೋರಾಗಿದ್ದು, ಆರೋಪಿಯು ಯುವತಿಯ ಬೆನ್ನಿಗೆ ಚಾಕುವಿನಿಂದ ಇರಿದು ಪರಾರಿಯಾದ್ದ. ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈಟ್‌ಫೀಲ್ಡ್ ಪೊಲೀಸರು ಆರೋಪಿ ಬಾಬುವನ್ನು ಬಂಧಿಸಿದ್ದಾರೆ. ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.