ಬೆಂಗಳೂರಿನ ಹಿರಿಯ ಉದ್ಯಮಿಯೊಬ್ಬರು ಸೈಬರ್ ವಂಚಕರ ಬಲೆಗೆ ಸಿಲುಕಿ 8.3 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ರಾಜೇಂದ್ರ ನಾಯ್ಡು (71) ವಂಚನೆಗೆ ಒಳಗಾದವರು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ನಂಬಿಸಿ ಸೈಬರ್ ಖದೀಮರು ಅವರಿಂದ ಹಣ ದೋಚಿಸಿದ್ದಾರೆ.
ಸೈಬರ್ ವಂಚಕರ ಜಾಲ ನಾಯ್ಡು ಅವರಿಗೆ ಕರೆ ಮಾಡಿ ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿದೆ ಎಂದು ನಂಬಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸಿದೆ. .ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಬಂದ ಲಾಭದ ಹಣವನ್ನು ದಾನ ಕಾರ್ಯಗಳಿಗೆ ಬಳಸಬಹುದು ಎಂಬ ಉದ್ದೇಶದಿಂದ ರಾಜೇಂದ್ರ ನಾಯ್ಡು ಹೂಡಿಕೆಗೆ ಮುಂದಾಗಿದ್ದರು. ರಿಲಯನ್ಸ್ ಕಂಪನಿಯ ಹೆಸರನ್ನು ಬಳಸಿ ನಂಬಿಕೆ ಮೂಡಿಸಿದ ವಂಚಕರುRARCLLPRO ಎಂಬ ಮೊಬೈಲ್ ಆ್ಯಪ್ ಇನ್ಸ್ಟಾಲ್ ಮಾಡು ವಂತೆ ಸೂಚಿಸಿದ್ದರು. ಆ್ಯಪ್ ಮೂಲಕ ಹೂಡಿಕೆ ವಿವರಗಳು ತೋರಿಸುತ್ತಿದ್ದುದರಿಂದ ನಂಬಿ ನಾಯ್ಡು ಮೊದಲಿಗೆ 25 ಲಕ್ಷ ರೂಪಾಯಿ ವರ್ಗಾಯಿಸಿದ್ದರು.
ಆ್ಯಪ್‌ನಲ್ಲಿ ಹೂಡಿಕೆ ಯಶಸ್ವಿಯಾಗಿದೆ ಎಂಬುದು ತೋರಿದ ಬಳಿಕ ಹಂತ ಹಂತವಾಗಿ ಒಟ್ಟು 8.3 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಿದ್ದಾರೆ. ಆ್ಯಪ್‌ನಲ್ಲಿ ಈ ಮೊತ್ತಕ್ಕೆ 59.4 ಕೋಟಿ ರೂಪಾಯಿ ಲಾಭಾಂಶ ಬಂದಿದೆ ಎಂದು ತೋರಿಸಲಾಗಿತ್ತು. ಇದರಲ್ಲಿ 15 ಕೋಟಿ ರೂಪಾಯಿ ವಿತ್‌ಡ್ರಾ ಮಾಡಲು ಪ್ರಯತ್ನಿಸಿದಾಗ ಸಾಧ್ಯವಾಗಿರಲಿಲ್ಲ. ಇದರಿಂದ ನಾಯ್ಡು ಅವರಿಗೆ ವಂಚನೆಯ ಅನುಮಾನ ಬಂದಿದೆ. ಹಣ ವಿತ್‌ಡ್ರಾ ಮಾಡಲು ಸಾಧ್ಯವಾಗದ ಬಗ್ಗೆ ಪ್ರಶ್ನಿಸಿದಾಗ ವಂಚಕರು, ಅದಕ್ಕೆ ಶೇಕಡಾ 18 ಸೇವಾ ಶುಲ್ಕಗಿ 2.70 ಕೋಟಿ ರೂಪಾಯಿ ಪಾವತಿಸಬೇಕು ಎಂದು ಬೇಡಿಕೆ ಇಟ್ಟರು. ರಾಜೇಂದ್ರ ನಾಯ್ಡು ತಕ್ಷಣ 1930 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಿದರು.
ಬೆಂಗಳೂರು ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚಕರ ಖಾತೆಯಲ್ಲಿ ಇದ್ದ 61 ಲಕ್ಷ ರೂಪಾಯಿ ಪೊಲೀಸರು ಫ್ರೀಜ್ ಮಾಡಿ ತನಿಖೆ ಮುಂದುವರಿಸಿದ್ದಾರೆ.


