ಬೆಂಗಳೂರು: ಬಳ್ಳಾರಿಯ ಬ್ಯಾನರ್ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿಯಾದ ಪ್ರಕರಣದ ಸಂಬಂಧ ಕೊಲೆ ಆರೋಪಿ ಗುರುಚರಣ್ ಸಿಂಗ್ ಸೇರಿ 26 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ.
ನ್ಯಾಯಾಲಯದ ಆದೇಶದ ಬೆನ್ನಲ್ಲೇ ಪೊಲೀಸರು ಪ್ರಕರಣದ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿದ್ದಾರೆ.
ಜನವರಿ 1ರಂದು ನಡೆದಿದ್ದ ಗಲಭೆ ದಿನ ಶಾಸಕ ಭರತ್ ರೆಡ್ಡಿ ಆಪ್ತನ ಗನ್‌ಮ್ಯಾನ್ ರಾಜಶೇಖರ್ ನಿಂದ ಫೈರಿಂಗ್ ಆಗಿದೆ ಗೊತ್ತಾಗಿದೆ. ಗನ್‌ಮ್ಯಾನ್‌ಗಳಾದ ಗುರುಚರಣ್ ಸಿಂಗ್, ಬಲ್ಜಿತ್ ಸಿಂಗ್ ಹಾಗೂ ಮಹೇಂದ್ರ ಸಿಂಗ್ನನ್ನು ಪೊಲೀಸರು ಬಂಧಿಸಿದ್ದಾರೆ.
ಅಷ್ಟೇ ಅಲ್ಲ ಗುರುಚರಣ ಸಿಂಗ್ ತಂಗಿದ್ದ ಎಂಆರ್ವಿ ಬಡಾವಣೆಯಲ್ಲಿರುವ ಮನೆಗೆ ಕರೆತಂದು ಮಹಜರೂ ಮಾಡಿದ್ದಾರೆ. ಈ ವೇಳೆ ಬುಲೆಟ್ ಕಾಟ್ರಿಜ್ಗಳನ್ನ ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಜನಾರ್ದನ ರೆಡ್ಡಿ ನಿವಾಸದ ಬಳಿಯೂ ತಂದು ಮಹಜರು ಮಾಡಿದ್ದಾರೆ.
ಬಳ್ಳಾರಿ ಬ್ಯಾನರ್ ಗಲಾಟೆ ಸಂಬಂಧ ಬ್ರೂಸ್‌ಪೇಟೆ ಠಾಣೆಯಲ್ಲಿ ಒಟ್ಟು 6 ಪ್ರಕರಣ ದಾಖಲಾಗಿವೆ. ಮೊನ್ನೆ 45 ಜನರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದ ಪೊಲೀಸರು, ಕಾಂಗ್ರೆಸ್‌ನ 10, ಬಿಜೆಪಿಯ 11 ಕಾರ್ಯಕರ್ತರು ಸೇರಿದಂತೆ 26 ಜನರನ್ನು ಬಂಧಿಸಿದ್ದರು. ಕೇಸ್ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವ್ಯಾಪ್ತಿಗೆ ಬರುವುದರಿಂದ 26 ಆರೋಪಿಗಳನ್ನು ಇಂದು ಕೋರ್ಟ್ಗೆ ಹಾಜರು ಪಡಿಸಿ ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


