ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಪ್ರಯುಕ್ತ ಬ್ಯಾನರ್ ಕಟ್ಟುವ ವಿಚಾರಕ್ಕೆ ನಡೆದ ಗಲಾಟೆ ವೇಳೆ ಕಾಂಗ್ರೆಸ್ ಕಾರ್ಯಕರ್ತ ಫೈರಿಂಗ್‌ಗೆ ಬಲಿಯಾದ ಪ್ರಕರಣದಲ್ಲಿ ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿಯ ಗನ್‌ಮ್ಯಾನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ನಡುವೆ ಪ್ರಕರಣದ ತನಿಖೆಯನ್ನು ಸಿಐಡಿ ತನಿಖೆಗೆ ವಹಿಸುವ ಯೋಚನೆ ಇದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿಯಾದ ಬಳಿಕ ಸತೀಶ್ ರೆಡ್ಡಿಯ ಗನ್‌ಮ್ಯಾನ್‌ಗಳಾದ ಮಹೇಂದ್ರ ಸಿಂಗ್, ಬಲಜಿತ್ ಸಿಂಗ್, ಗುರುಚರಣ್ ಸಿಂಗ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಮೂವರು ಪಂಜಾಬ್ ಮೂಲದವರು. ಬ್ರೂಸ್‌ಪೇಟೆ ಪೊಲೀಸರು ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬ್ಯಾನರ್ ಅಳವಡಿಕೆ ವಿಚಾರವಾಗಿ ಜ.1 ರಂದು ಜನಾರ್ದನ ರೆಡ್ಡಿ ನಿವಾಸದ ಎದುರು ಗಲಾಟೆ ನಡೆದಿತ್ತು. ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಹೊಡೆದಾಟವಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು.. ಸತೀಶ್ ರೆಡ್ಡಿ ಗನ್‌ಮ್ಯಾನ್‌ಗಳು ಫೈರಿಂಗ್ ಮಾಡಿದ್ದರು. ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವೀಡಿಯೊ ಆಧರಿಸಿ 10ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಬಳ್ಳಾರಿ ಗಲಾಟೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ಕೊಡುವ ಯೋಚನೆ ಇದೆ. ಸಿಎಂ ಸಿದ್ದರಾಮಯ್ಯ ಅವರ ಜೊತೆ ಮಾತಾಡಿ ಮುಂದಿನ ತೀರ್ಮಾನ ಮಾಡುವುದಾಗಿ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಬಳ್ಳಾರಿ ಗಲಾಟೆಯಲ್ಲಿ ಫೈರಿಂಗ್ ಆಗಿರುವುದು ಖಾಸಗಿ ಗನ್‌ನಿಂದ. ಖಾಸಗಿ ಗನ್ ಮ್ಯಾನ್‌ಗಳ ಗನ್, ರಿವಾಲ್ವಾರ್‌ಗಳನ್ನ ವಶಕ್ಕೆ ಪಡೆದುಕೊಂಡಿದ್ದೇವೆ. ಯಾವ ಗನ್‌ನಿಂದ ಫೈಯರ್ ಆಗಿದೆ ಎಂದು ಪರಿಶೀಲನೆ ಮಾಡಲು ತಜ್ಞರಿಗೆ ಕೊಡಲಾಗಿದೆ. FSLಗೆ ಬುಲೆಟ್ ಕೊಟ್ಟು ಪರಿಶೀಲನೆ ಮಾಡಿವರದಿ ಕೇಳಿದ್ದೇವೆ ಎಂದರು.
ಪೊಲೀಸ್ ಗನ್ ನಿಂದ ಫೈಯರ್ ಆಗಿಲ್ಲವೆಂದು ಗೊತ್ತಾಗಿದೆ. ಎಡಿಜಿಪಿ ಮಾಹಿತಿ ಕೊಟ್ಟಿದ್ದಾರೆ. ಅಗತ್ಯ ಇದ್ದರೆ ಸಿಐಡಿ ತನಿಖೆಗೆ ಕೊಡುವುದಾಗಿ ಹೇಳಿದರು. ಆರೋಪಿಗಳನ್ನು ಬಂಧಿಸದಿದ್ದರೆ ಬೆಂಗಳೂರು ಪಾದಯಾತ್ರೆ ಮಾಡುವುದಾಗಿ ಶ್ರೀರಾಮುಲು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾನೂನು ಚೌಕಟ್ಟಿನಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕು ಅದನ್ನು ಪೊಲೀಸರು ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.


