ಬೆಳಗಾವಿಯಲ್ಲಿ ಅಪ್ರಾಪ್ತ ವಯಸ್ಸಿನ 15 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ವಯಸ್ಕರಿಬ್ಬರು ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ರಾಜ್ಯದ ಬೇರೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಪಿಐ ಒಬ್ಬರ ಅಪ್ರಾಪ್ರ ವಯಸ್ಕ ಪುತ್ರ ಕೂಡ ಸೇರಿದ್ದಾನೆ.
ರೆಸಾರ್ಟ್ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೆಳಗಾವಿಯ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತ ವಯಸ್ಕರಿಗೆ ರೆಸಾರ್ಟ್ ಕೊಟ್ಟ ಆರೋಪದಡಿ ರೋಹನ್ ಪಾಟೀಲ್ ಹಾಗೂ ಅಶುತೋಷ್ ಪಾಟೀಲ್ ಇಬ್ಬರನ್ನು ಬಂಧಿಸಿ ಪೊಲೀಸರು ಹಿಂಡಲಗಾ ಜೈಲಿಗೆ ಕಳಿಸಿದ್ದಾರೆ.
ಆರೋಪಿಗಳು ಮನೆಯೊಂದನ್ನು ಬಾಡಿಗೆಗೆ ಪಡೆದು ರೆಸಾರ್ಟ್ ಆಗಿ ಪರಿವರ್ತನೆ ಮಾಡಿದ್ದರು. ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದು, ಆರೋಪಿ ಸಾಕೀಬ್ ತನ್ನ ಹೆಸರಲ್ಲಿ ರೂಮ್ ಬುಕ್ ಮಾಡಿದ್ದ. ಬಾಲಕಿಯ ಸ್ನೇಹಿತರು ಬಾಲಕಿಯನ್ನು ಕರೆದುಕೊಂಡು ರೂಮಿಗೆ ಹೋಗಿದ್ದು, ಮೂವರು ಸೇರಿ ಅತ್ಯಾಚಾರ ನಡೆಸಿದ್ದರು.
ಮನೆಗೆ ವಾಪಸ್ ಬಂದ ಬಳಿಕ ಬಾಲಕಿ ಹೊಟ್ಟೆ ನೋವು ಎಂದಾಗ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.