ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಇನಾಮದಾರ್ ಒಡೆತನದ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಬಾಯ್ಲರ್ ಸ್ಫೋಟದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಕನಿಷ್ಠ 6 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಬುಧವಾರ ಸಂಭವಿಸಿದೆ.
ಅಕ್ಷಯ ತೋಪಡೆ (45), ದೀಪಕ್ ಮುನವಳ್ಳಿ (31), ಸುದರ್ಶನ ಬನೋಶಿ (25) ಮೃತಪಟ್ಟ ದುರ್ದೈವಿಗಳು.
ಬುಧವಾರ ಮಧ್ಯಾಹ್ನ ಕಾರ್ಖಾನೆಯಲ್ಲಿ ಉತ್ಪಾದನಾ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಬಾಯ್ಲರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಆವರಣವೆಲ್ಲ ಹೊಗೆಯಿಂದ ಆವೃತವಾಗಿತ್ತು. ಮೃತರನ್ನು ಸಮೀಪದ ಮರಕುಂಬಿ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಕೆಲಸದಲ್ಲಿ ನಿರತರಾಗಿದ್ದ ಇವರು ಸ್ಫೋಟದ ನೇರ ಹೊಡೆತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.
ಕಾರ್ಖಾನೆಯ ನಂಬರ್ 1 ಕಂಪಾರ್ಟಮೆಂಟ್ ನಲ್ಲಿ ವಾಲ್ ರಿಪೇರಿ ಮಾಡೋ ಸಂದರ್ಭದಲ್ಲಿ ಈ ದುರಂತ ಸಂಭವಿಸಿದ್ದು, ಧ್ಯಾಹ್ನ 2 ಗಂಟೆಯ ಸಮಯದಲ್ಲಿ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ಘಟನೆ ಸಂಭವಿಸಿದೆ. 8 ಜನರಿಗೆ ಬಿಸಿ ಪದಾರ್ಥ (ಮಳ್ಳಿ) ಮೈ ಮೇಲೆ ಬಿದ್ದು ಗಾಯವಾಗಿದೆ. ಒಬ್ಬರನ್ನು ಬೈಲಹೊಂಗಲ ಆಸ್ಪತ್ರೆಗೆ ರವಾನಿಸಿದ್ದು, ಇನ್ನುಳಿದವರನ್ನು ಬೆಳಗಾವಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಝೀರೋ ಟ್ರಾಫಿಕ್‌ನಲ್ಲಿ ಗಾಯಾಳುಗಳನ್ನು ಶಿಫ್ಟ್ ಮಾಡಲಾಗಿದೆ. ದೂರು ಆಧರಿಸಿ ತನಿಖೆ ಮಾಡುತ್ತೇವೆ ಬೆಳಗಾವಿಯಲ್ಲಿ ಎಸ್ಪಿ ಕೆ ರಾಮರಾಜನ್ ಎಂದರು.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಆರು ಕಾರ್ಮಿಕರನ್ನು ಕೂಡಲೇ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಮೂವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದು, ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸ್ಥಳಕ್ಕೆ ಅಧಿಕಾರಿಗಳ ಭೇಟಿ:
ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಬೈಲಹೊಂಗಲ ಪೊಲೀಸರು ಹಾಗೂ ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕಾರ್ಖಾನೆಯಲ್ಲಿ ಸುರಕ್ಷತಾ ಕ್ರಮಗಳ ಲೋಪವಿದೆಯೇ ಎಂಬ ಬಗ್ಗೆ ತನಿಖೆ ಆರಂಭವಾಗಿದೆ.


