ಕೊರೆಯುವ ಚಳಿಯಿಂದ ತಪ್ಪಿಸಿಕೊಳ್ಳಲೆಂದು ಯುವಕರು ಕೊಠಡಿಯಲ್ಲಿ ಇದ್ದಿಲು ಬೆಂಕಿ ಹಾಕಿಕೊಂಡು ಮಲಗಿದ್ದವರು ಹೆಣವಾಗಿ ಹೋದ ಹೃದಯವಿದ್ರಾವಕ ಘಟನೆಯೊಂದು ಬೆಳಗಾವಿಯ ಅಮನ್ ನಗರದಲ್ಲಿ ನಡೆದಿದೆ.
ಕೊರೆಯುವ ಚಳಿ ಹಾಗೂ ಸೊಳ್ಳೆಗಳ ಕಾಟದಿಂದ ಪಾರಾಗಲು ಯುವಕರು ಇದ್ದಿಲು ಬೆಂಕಿ ಹಾಕಿಕೊಂಡು ಮಲಗಿದ್ದರು. ರಾತ್ರಿ ದಟ್ಟ ಹೊಗೆ ಆವರಿಸಿಕೊಂಡು ಹಾಗೂ ಸರಿಯಾಗಿ ಆಮ್ಲಜನಕ ಪೂರೈಕೆಯಾಗದೆ ಮೂವರು ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ. ಒಬ್ಬ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.
ಕೋಣೆಯಲ್ಲಿ ಎಲ್ಲಿಯೂ ವೆಂಟಿಲೇಶನ್ ಇಲ್ಲದ ಕಾರಣ ಆಮ್ಲಜನಕ ಕೊರತೆಯಿಂದ ರಿಹಾನ್, ಮೊಹಿನ್, ಸರ್ಫರಾಜ ಸ್ಥಳದಲ್ಲಿಯೇ ಅಸು ನೀಗಿದ್ದಾರೆ. ಶಾಹಾನವಾಜ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ದುರಂತ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಾಹಿತಿ ಪಡೆದುಕೊಂಡಿದ್ದಾರೆ. ಯುವರಕ ಸಾವು ಸ್ವಾಭಾವಿಕವೋ ಅಥವಾ ಯಾರದ್ದಾದರೂ ಕೈವಾಡವಿದೆಯೋ ಎನ್ನುವ ದೃಷ್ಟಿಕೋನದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವಾಹನಗಳಿಗೆ ಹೆದರಿ ಕುಣಿಗೆ ಹಾರಿದ ಕುರಿಗಳ ಸಾವು
ರಾಯಚೂರು ತಾಲೂಕಿನ ಪುಚ್ಚಲದಿನ್ನಿ ಗ್ರಾಮದ ಬಳಿ ರಸ್ತೆಯ ಎರಡು ಬದಿಯಿಂದ ವಾಹನ ಬಂದಿದ್ದಕ್ಕೆ ಹೆದರಿ ಕುರಿಗಳು ಕುಣಿಗೆ ಹಾರಿದ್ದು, ಅವುಗಳಲ್ಲಿ 16 ಮೃತಪಟ್ಟಿವೆ, ನಾಲ್ಕರ ಸ್ಥಿತಿ ಗಂಭೀರವಾಗಿದೆ. ಪುಚ್ಚಲದಿನ್ನಿ ಗ್ರಾಮದ ಭೀಮಣ್ಣ ಹಾಗೂ ದುಳ್ಳಯ್ಯ ಎಂಬವರಿಗೆ ಸೇರಿದ 16 ಕುರಿಗಳು ಮೃತಪಟ್ಟಿದ್ದು, ಎರಡು ಲಕ್ಷ ರೂ. ನಷ್ಟವಾಗಿದೆ.
ಕುರಿಗಳನ್ನು ಮೇಯಲು ಕರೆದುಕೊಂಡು ಹೋಗಿದ್ದಾಗ ತಲಮಾರಿ ಕಡೆಯಿಂದ ಬಸ್ ಹಾಗೂ ಯರಗೇರಾ ಕಡೆಯಿಂದ ಟಾಟಾ ಏಸ್ ಬಂದಿದೆ. ಇದರಿಂದ ಕುರಿಗಳು ಹೆದರಿ ಕುಣಿಗೆ ಹಾರಿವೆ. ಗಾಯಗೊಂಡ ನಾಲ್ಕು ಕುರಿಗಳಿಗೆ ಪಶುವೈದ್ಯರು ಚಿಕಿತ್ಸೆ ನೀಡಿದ್ದು, ಚೇತರಿಸಿಕೊಳ್ಳುತ್ತಿವೆ.


