ಎಡಗಾಲಿನ ರಾಡ್ ತೆಗೆಸಲೆಂದು ಶಸ್ತ್ರಕ್ರಿಯೆಗಾಗಿ ಹಾಸನ ಹಿಮ್ಸ್ ಗೆ ದಾಖಲಾಗಿದ್ದ ಮಹಿಳೆಯ ಬಲಗಾಲನ್ನು ವೈದ್ಯರು ಆಪರೇಷನ್ ಮಾಡಿ ಆಕೆ ಓಡಾಡಲು ಆಗದೆ ಹಾಸಿಗೆ ಹಿಡಿಯುವಂತೆ ಮಾಡಿರುವುದಾಗಿ ಆರೋಪ ಕೇಳಿ ಬಂದಿದೆ.
ಜ್ಯೋತಿ ಎಂಬವರು ಎಡಗಾಲಿನಲ್ಲಿದ್ದ ರಾಡ್ ತೆಗೆಸಲು ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ವೈದ್ಯರು ಎಡಗಾಲಿನ ಬದಲು ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈಗ ಎರಡು ಕಾಲುಗಳಿಗೂ ಬ್ಯಾಂಡೇಜ್ ಸುತ್ತಿದ್ದು, ಜ್ಯೋತಿ ಅವರಿಗೆ ಎರಡು ಕಾಲುಗಳಲ್ಲೂ ತೀವ್ರ ನೋವು ಉಂಟಾಗಿ ಓಡಾಡಲು ಸಾಧ್ಯವಿಲ್ಲದೆ ಆಸ್ಪತ್ರೆಯ ಹಾಸಿಗೆಯಲ್ಲೇ ಮಲಗುವ ಸ್ಥಿತಿ
ಬಂದಿದೆ.
ವೈದ್ಯರ ನಿರ್ಲಕ್ಷ್ಯದಿಂದ ನಮ್ಮ ಮಗಳಿಗೆ ಎರಡು ಕಾಲು ನೋವು ಆಗಿದೆ, ಕಾಲುಗಳ ಚಿಕಿತ್ಸೆಗೆ ಇನ್ನೂ ಸಮಯ ಬೇಕಾಗಿದೆ. ಸೂಕ್ತ ಪರಿಹಾರ ನೀಡಿ, ಈ ತಪ್ಪು ಮಾಡಿದವರಿಗೆ
ಕಠಿಣ ಶಿಕ್ಷೆ ನೀಡಿ ಎಂದು ಪೋಷಕರು ಒತ್ತಾಯಿಸಿದ್ದಾರೆ. ಕುಟುಂಬವು ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಸರ್ಕಾರಿ ಅಧಿಕಾರಿಗಳಿಗೆ ದೂರು ನೀಡಿದೆ.
ಎರಡುವರೆ ವರ್ಷಗಳ ಹಿಂದೆ ಜ್ಯೋತಿ ಅವರಿಗೆ ಅಪಘಾತವಾಗಿತ್ತು. ಚಿಕ್ಕಮಗಳೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಎಡಗಾಲು ಪೆಟ್ಟಾಗಿತ್ತು. ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆ ಯಲ್ಲಿ ಎಡಗಾಲಿಗೆ ವೈದ್ಯಕೀಯ ರಾಡ್ ಅಳವಡಿಸಲಾಗಿತ್ತು. ಆ ರಾಡ್‌ನಿಂದ ನೋವು ಬಾಧಿಸುತ್ತಿತ್ತು. ಇತ್ತೀಚೆಗೆ ಹಿಮ್ಸ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಸಂತೋಷ್ ಅವರನ್ನು ಸಂಪರ್ಕಿಸಿ ರಾಡ್ ತೆಗೆಯುವ ಚಿಕಿತ್ಸೆಗೆಂದು ದಾಖಲಾಗಿದ್ದರು. ಡಾ. ಸಂತೋಷ್ ಅವರೇ ರಾಡ್ ತೆಗೆಯುವಂತೆ ಸೂಚಿಸಿದ್ದರು.