Menu

ಬಿಡಿಸಿಸಿ ಬ್ಯಾಂಕ್ ಚುನಾವಣೆ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವು

ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ ಬ್ಯಾಂಕ್) ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಬಮೂಲ್ ಅಧ್ಯಕ್ಷ ಡಿಕೆ ಸುರೇಶ್  ಹೇಳಿದ್ದಾರೆ.

ಚಾಮರಾಜಪೇಟೆಯ ಬಿಡಿಸಿಸಿ ಬ್ಯಾಂಕ್ ನಲ್ಲಿ  ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಸುರೇಶ್ , ಬ್ಯಾಂಕಿನ ಚುನಾವಣೆ ನಡೆದಿದ್ದು, 18 ಕ್ಷೇತ್ರಗಳ ಪೈಕಿ 15ರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ನೇರವಾಗಿ ಗೆದ್ದಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ 2 ಕ್ಷೇತ್ರಗಳು, ಚನ್ನಪಟ್ಟಣದ 1, ಕನಕಪುರದ 2, ಮಾಗಡಿಯ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಸೋಮಶೇಖರ್ ಅವರು ನಮ್ಮ ಜೊತೆ ಕೈಜೋಡಿಸಿದ್ದು, ಅವರ ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿ ಗೆದ್ದಿದ್ದಾರೆ. ಬೆಂಗಳೂರು ಉತ್ತರ ಜಿಲ್ಲೆಯ ಹೊಸಕೋಟೆಯ 2, ದೇವನಹಳ್ಳಿಯಲ್ಲಿ 1, ದೊಡ್ಡಬಳ್ಳಾಪುರದಲ್ಲಿ 1, ಆನೇಕಲ್ ನಲ್ಲಿ 1, ಬೆಂಗಳೂರು ಉತ್ತರ ಕ್ಷೇತ್ರದಿಂದ 1 ಕ್ಷೇತ್ರದಲ್ಲಿ ಹಾಗೂ ಹೆಚ್. ಎಂ ರೇವಣ್ಣ ಅವರ ಸಹಕಾರದಿಂದ 1 ಇತರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ. ಉಳಿದಂತೆ ನೆಲಮಂಗಲ ಹಾಗೂ ಸೋಲೂರು ಕ್ಷೇತ್ರಗಳ 2 ಸ್ಥಾನಗಳನ್ನು ಬಿಜೆಪಿ ಸಹಕಾರದೊಂದಿಗೆ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದು ಮಾಹಿತಿ ನೀಡಿದರು.

ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಕೆಹೆಚ್ ಮುನಿಯಪ್ಪ, ಕೃಷ್ಣ ಭೈರೇಗೌಡ ಹಾಗೂ ಶಾಸಕರಾದ ಶಿವಣ್ಣ, ಶರತ್ ಬಚ್ಚೇಗೌಡ, ಇಕ್ಬಾಲ್ ಹುಸೇನ್, ಬಾಲಕೃಷ್ಣ, ಸಿಪಿ ಯೋಗೇಶ್ವರ್, ಶ್ರೀನಿವಾಸ್, ಮುಖಂಡರಾದ ಆರ್‌ಕೆ  ರಮೇಶ್, ವೆಂಕಟರಮಣಪ್ಪಮತ್ತಿತರ ಮುಖಂಡರ ಸಹಕಾರದಿಂದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಆಡಳಿತ ಮಂಡಳಿಗೆ ಆಯ್ಕೆ ಮಾಡಲಾಗಿದೆ. ಈ ಚುನಾವಣೆಯಲ್ಲಿ ಸಹಕಾರ ನೀಡಿದ ಎಲ್ಲಾ ಸಹಕಾರಿ ಬಂಧುಗಳು, ಪಕ್ಷದ ಎಲ್ಲಾ ಮುಖಂಡರು, ಸಚಿವರು, ಶಾಸಕರು, ಪರಾಜಿತ ಅಭ್ಯರ್ಥಿಗಳಿಗೆ ಧನ್ಯವಾದಗಳು ಎಂದರು.

ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಬಹಳ ಇತಿಹಾಸ ಇರುವ ಬ್ಯಾಂಕ್. ರಾಜಧಾನಿಯಲ್ಲಿರುವ ರಾಜ್ಯದ ಗಮನ ಸೆಳೆಯುವ ಬ್ಯಾಂಕ್ ಇದಾಗಿದ್ದು, ಅನೇಕ ಏಳು ಬೀಳು ಕಂಡಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಬ್ಯಾಂಕ್ ಉತ್ತಮ ಆಡಳಿತ ನಡೆಸಿಕೊಂಡು ಬಂದಿದೆ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ನಗರ ಜಿಲ್ಲೆಗಳ ಒಟ್ಟು 36 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ ಹೊಂದಿರುವ ಬ್ಯಾಂಕ್ ಇದಾಗಿದೆ ಎಂದು ಹೇಳಿದರು.

ಬಿಡಿಸಿಸಿ ಬ್ಯಾಂಕ್  ಅನ್ನು ಅತ್ಯುತ್ತಮವಾಗಿ ಮುನ್ನಡೆಸಿ ಈ ಬ್ಯಾಂಕ್ ವ್ಯಾಪ್ತಿಗೆ ಬರುವ ರೈತರು ಹಾಗೂ ನಾಗರಿಕರಿಗೆ ಉತ್ತಮ ಸೇವೆ, ಸೌಲಭ್ಯವನ್ನು ನಮ್ಮ ಆಡಳಿತ ಮಂಡಳಿ ನೀಡಲಿದೆ ಎಂದು ಭರವಸೆ ನೀಡಿದರು.

Related Posts

Leave a Reply

Your email address will not be published. Required fields are marked *