ನಿವೇಶನ, ಮನೆ, ಪ್ಲ್ಯಾಟ್ ಹಂಚಿಕೆಯ ನಿಯಮಗಳಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬದಲಾವಣೆ ಮಾಡಿದ್ದು, ಎರಡು ವರ್ಷ ರಾಜ್ಯದಲ್ಲಿ ವಾಸವಿದ್ದರೆ ಇನ್ನು ಮುಂದೆ ಹೊರ ರಾಜ್ಯದವರೂ ಬಿಡಿಎ ಸೈಟ್, ಮನೆ, ಫ್ಲ್ಯಾಟ್ ಪಡೆಯಬಹುದಾಗಿದೆ.
ಈ ಹಿಂದೆ ಬಿಡಿಎ ಸೈಟ್ ಪಡೆಯಬೇಕಾದರೆ 10 ವರ್ಷ ಬೆಂಗಳೂರಿನಲ್ಲಿ ಕಡ್ಡಾಯವಾಗಿ ವಾಸ ಇರಬೇಕು ಎಂಬ ನಿಯಮವಿತ್ತು. ಈ ನಿಯಮವನ್ನು ಬಿಡಿಎ ಕೈ ಬಿಟ್ಟಿದೆ. ಬಿಡಿಎ ನಿರ್ಮಿಸಿದ ಮನೆಗಳು ಮಾರಾಟವಾಗದ ಕಾರಣ ಮಾರಾಟ ಉದ್ದೇಶದಿಂದ ನಿಯಮ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಈಗ ಬಿಡಿಎಯಿಂದ ನಿವೇಶನ, ಮನೆ, ಪ್ಲ್ಯಾಟ್ ಪಡೆಯಲು ಅರ್ಜಿದಾರರು ಎರಡು ವರ್ಷ ಬೆಂಗಳೂರು ನಿವಾಸಿಯಾಗಿರಬೇಕು, ಆಧಾರ್ ಕಾರ್ಡ್‌ನಲ್ಲಿ ಬೆಂಗಳೂರಿನ ವಿಳಾಸ ಇರಬೇಕು. ಹೊರ ರಾಜ್ಯದವರು ಆಗಿದ್ದು ಬೆಂಗಳೂರಿನಲ್ಲಿ 2 ವರ್ಷ ರಾಜ್ಯದಲ್ಲಿ ಕಡ್ಡಾಯ ವಾಸ ಇರಬೇಕು.
ಮನೆ ಬೇಕು ಎಂದು ಸಲ್ಲಿಸಿದ್ದ ಅರ್ಜಿಗಳಲ್ಲಿ ಯಾವುದೇ ಬಾಕಿ ಇಲ್ಲ. ಎಲ್ಲರಿಗೂ ಮನೆಯನ್ನು ಕೊಟ್ಟಿದ್ದೇವೆ. ಇನ್ನೂ 2,400 ಮನೆಗಳು ಇದ್ದು ಅರ್ಜಿ ಹಾಕಿದರೆ ಮನೆ ನೀಡುತ್ತೇವೆ. ಅರ್ಜಿ ಹಾಕಿ ಮನೆ ಹಂಚಿಕೆಯಾಗಿಲ್ಲ ಎನ್ನುವುದು ಸುಳ್ಳು. ಸೈಟ್ ಖರೀದಿಗೆ ಮಾತ್ರ ನಿಯಮಗಳು ಇವೆ, ಯಾವುದೇ ನಿಯಮಗಳು ಬದಲಾವಣೆ ಆಗಿಲ್ಲ ಎಂದು ಬಿಡಿಎ ಆರ್ಥಿಕ ಸಮಿತಿ ಸದಸ್ಯ ಲೋಕೇಶ್ ಪ್ರತಿಕ್ರಿಯಿಸಿದ್ದಾರೆ.


