Menu

ಬಿಬಿಎಂಪಿಗೆ ಚುನಾವಣೆ: ಅರ್ಜಿ ವಿಚಾರಣೆ ನವೆಂಬರ್‌ ಮೂರಕ್ಕೆ

BBMP elections

ಬಿಬಿಎಂಪಿ ಚುನಾವಣೆ ಸಂಬಂಧ ಮೂರು ದಿನಗಳ ಹಿಂದೆ ಸರ್ಕಾರ ಸಲ್ಲಿಸಿದ್ದ ಅಫಿಡವಿಟ್‌ ಓದಿದ ಬಳಿಕ ನ್ಯಾಯಾಲಯ ವಿಚಾರಣೆಯನ್ನು ನ.3ಕ್ಕೆ ಮುಂದೂಡಿದೆ. ಕಳೆದ 5 ವರ್ಷದಿಂದ ಬಿಬಿಎಂಪಿಗೆ ಚುನಾವಣೆ ನಡೆಸಿಲ್ಲ. ಚುನಾವಣೆ ನಡೆಸಲು ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ಮಾಜಿ ಸದಸ್ಯ ಶಿವರಾಜ್ ಸೇರಿ ಮೂವರು ಸಲ್ಲಿಸಿದ್ದ ಅರ್ಜಿಗಳು ನ್ಯಾ.ಸೂರ್ಯಕಾಂತ್ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ವಿಚಾರಣೆಗೆ ಬಂದಿತ್ತು.

ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಗ್ರೇಟರ್ ಬೆಂಗಳೂರಿಗೆ ಅಧಿಸೂಚನೆ ಹೊರಡಿಸಿ ಜನರ ಅಭಿಪ್ರಾಯ ಪಡೆಯಲಾಗುತ್ತಿದೆ. ಸೆಪ್ಟೆಂಬರ್‌ನಲ್ಲಿ ವಾರ್ಡ್‌ ಮರು ವಿಂಗಡಣೆ, ನವೆಂಬರ್‌ನಲ್ಲಿ ಮೀಸಲಾತಿ ಪ್ರಕಟಿಸಲು ದಿನಾಂಕ ನಿಗದಿ ಪಡಿಸಲಾಗಿದೆ. ಇದಾದ ಬಳಿಕ ಪಾಲಿಕೆಗೆ ಚುನಾವಣೆ ನಡೆಸಲಾಗುತ್ತದೆ ಎಂದು ಹೇಳಿದೆ.

ಅರ್ಜಿದಾರರ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಳೆದ ಐದು ವರ್ಷಗಳಿಂದ ಚುನಾವಣೆ ನಡೆದಿಲ್ಲ ಎಂದು ಸುಪ್ರೀಂ ಕೋರ್ಟ್‌ ಗಮನಕ್ಕೆ ತಂದರು. ಹೊಸ ಕಾಯ್ದೆ ರಚನೆ, ಪಾಲಿಕೆ ರಚನೆ ಸೇರಿ ಹಲವು ಅಂಶಗಳನ್ನು ಸರ್ಕಾರವೇ ಮುಂದಿಟ್ಟಿದೆ. ಹಾಗಾಗಿ ನವೆಂಬರ್ 2ನೇ ತಾರೀಕಿನೊಳಗೆ ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿ ನೀಡಿ ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತು. ವಿಚಾರಣೆಯನ್ನು ನವೆಂಬರ್ 3ಕ್ಕೆ ಮುಂದೂಡಿತು.

ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ, ಅರ್ಜಿದಾರರ ಪರವಾಗಿ ಮುಕುಲ್ ರೊಹಟಗಿ ವಾದ ಮಂಡಿಸಿದರು. ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಕಾಯ್ದೆಯಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸುವ ಸಂಬಂಧ ಸ್ಪಷ್ಟ ಮಾಹಿತಿ ಇಲ್ಲದ ಕಾರಣ ಸ್ಪಷ್ಟತೆ ಕೋರಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್‌.ಸಂಗ್ರೇಶಿ ತಿಳಿಸಿದ್ದಾರೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಚುನಾವಣೆ ನಡೆಸಲು ಹೊಸದಾಗಿ ಗಡಿ ಗುರುತಿಸಬೇಕಿದೆ. ಮೀಸಲಾತಿ ಪಟ್ಟಿಯನ್ನು ಪ್ರಕಟಿಸಬೇಕಾಗಿದೆ. ಪಾಲಿಕೆಗೆ ಮೀಸಲಾತಿ ಪಟ್ಟಿಯನ್ನು ನೀಡುವ ಸಂಬಂಧವೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ಸಾಗಿದರೆ ಮುಂದಿನ ಫೆಬ್ರವರಿ ವೇಳೆಗೆ ಚುನಾವಣೆ ನಡೆಸಬಹುದು ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Related Posts

Leave a Reply

Your email address will not be published. Required fields are marked *