Menu

ಯತ್ನಾಳ್​ ಉಚ್ಚಾಟನೆ: ಏ.13ಕ್ಕೆ‌ ಬೆಳಗಾವಿಯಲ್ಲಿ ಪ್ರತಿಭಟನೆ ಎಂದ ಬಸವಜಯ ಮೃತ್ಯುಂಜಯ ಸ್ವಾಮೀಜಿ

ಏ.10ರೊಳಗೆ ಬಸನಗೌಡ ಪಾಟೀಲ ಯತ್ನಾಳ್​ ಅವರ ಉಚ್ಚಾಟನೆ ಆದೇಶ ವಾಪಸ್‌ ಪಡೆಯದಿದ್ದರೆ ಏ.13ರಂದು‌ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಿಜೆಪಿ ಹೈಕಮಾಂಡ್​ಗೆ ಎಚ್ಚರಿಕೆ ನೀಡಿದ್ದಾರೆ.

ಪಂಚಮಸಾಲಿ ಬಂಧುಗಳು, ಹಿಂದೂಪರ‌ ಕಾರ್ಯಕರ್ತರು, ಯತ್ನಾಳ್​ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಗೆ ಆಗಮಿಸುವಂತೆ ಸ್ವಾಮೀಜಿ ಮನವಿ ಮಾಡಿದ್ದಾರೆ.

ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವ ಕ್ರಮ ಖಂಡಿಸಿ ಬೆಳಗಾವಿಯ ಗಾಂಧಿ ಭವನದಲ್ಲಿ ಪಂಚಮಸಾಲಿ ಮುಖಂಡರ ಸಭೆ ನಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿ ಎಸ್​ ಯಡಿಯೂರಪ್ಪ, ಬಿ ವೈ ವಿಜಯೇಂದ್ರ ಕುತಂತ್ರದಿಂದ ಯತ್ನಾಳರನ್ನು ಉಚ್ಚಾಟನೆ ಮಾಡಲಾಗಿದೆ. ಇದನ್ನು ಪಂಚಮಸಾಲಿ ಸಮುದಾಯ ಖಂಡಿಸುತ್ತದೆ ಎಂದಿದ್ದಾರೆ.

ಲಿಂಗಾಯತ ಸಮುದಾಯ ಕಡೆಗಣಿಸಿ ಯಾವುದೇ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಜನತಾದಳ ಇಬ್ಭಾಗ ಆದಾಗ ನಮ್ಮ ಸಮಾಜ ಯಡಿಯೂರಪ್ಪರ ಬೆನ್ನಿಗೆ ನಿಂತಿತ್ತು. ಇದೇ ಯಡಿಯೂರಪ್ಪ ನಮ್ಮ ಸಮಾಜದ ಮೀಸಲಾತಿ ಹೋರಾಟ ಹತ್ತಿಕ್ಕಿದ್ದರು. ಯತ್ನಾಳ್​ ಲಿಂಗಾಯತ ನಾಯಕರಾಗಿ ಹೊಮ್ಮುತ್ತಿದ್ದ ಸಂದರ್ಭದಲ್ಲಿ ಕುತಂತ್ರ ಮಾಡಿ ಅವರನ್ನು ಉಚ್ಚಾಟಿಸಿದ್ದಾರೆ ಎಂದು ಸ್ವಾಮೀಜಿ ಹೇಳಿದ್ದಾರೆ.

ಕರ್ನಾಟಕದಲ್ಲಿ ನಮ್ಮ ಸಮಾಜ ಬಿಟ್ಟು ಪಕ್ಷ ಅಧಿಕಾರಕ್ಕೆ ತರುತ್ತೇವೆ ಎಂಬುದು ನಿಮ್ಮ ಭ್ರಮೆ. ಮೀಸಲಾತಿ ಹೋರಾಟ ಹತ್ತಿಕ್ಕುವ ಕೆಲಸವನ್ನು ಹಿಂದಿನ ಬಿಜೆಪಿ ಸರ್ಕಾರ ಮಾಡಿತು. ಅದಕ್ಕಾಗಿ ನಮ್ಮ ಸಮಾಜ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಬೆನ್ನಿಗೆ ನಿಂತಿತ್ತು. ಈ ನಡುವೆ ಯತ್ನಾಳ್​ ಬಿಜೆಪಿ ರಾಜ್ಯಾಧ್ಯಕ್ಷ, ಸಿಎಂ ಆಗುತ್ತಾರೆ ಎಂಬ ವಿಶ್ವಾಸವಿತ್ತು. ಕುತಂತ್ರದಿಂದ ಯತ್ನಾಳರನ್ನು ಉಚ್ಚಾಟನೆ ಮಾಡಲಾಗಿದೆ ಎಂದು ಸ್ವಾಮೀಜಿ ಆರೋಪಿಸಿದರು.

ಯತ್ನಾಳ್​ ಅಧಿಕಾರ ಇದ್ದಾಗ, ಇಲ್ಲದಾಗಲೂ ಮೀಸಲಾತಿಗೆ ಹೋರಾಟ ಮಾಡಿದ್ದರು. ಹೀಗಾಗಿ ನಮ್ಮ ಸಮಾಜ ಯತ್ನಾಳ್​ ಬೆನ್ನಿಗೆ ನಿಲ್ಲುತ್ತದೆ. ಬಿಜೆಪಿ ವರಿಷ್ಠರು ಮಾತುಕತೆಗೆ ಕರೆದರೆ ನಾನು ಹೋಗಲು ಸಿದ್ಧ ಎಂದು ತಿಳಿಸಿದ್ದಾರೆ. ನಮ್ಮ ಹೋರಾಟ ಪ್ರಧಾನಿ‌ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ವಿರುದ್ಧ ಅಲ್ಲ. ಯಡಿಯೂರಪ್ಪ ಕುತಂತ್ರವೇ ಯತ್ನಾಳ್​ ಉಚ್ಚಾಟನೆಗೆ ಕಾರಣವಾಗಿದೆ. ಆ ಕುತಂತ್ರಿಗಳ ವಿರುದ್ಧ ಹೋರಾಟ ನಮ್ಮದು ಎಂದು ಸ್ವಾಮೀಜಿ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *