Menu

ಬೂಕರ್ ಅವಾರ್ಡ್​ ಅಂತಿಮ ಪಟ್ಟಿಯಲ್ಲಿ ಕನ್ನಡದ ಬಾನು ಮುಷ್ತಾಕ್ ಕೃತಿ

ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಅಂತಿಮ 13ರ ಪಟ್ಟಿಯಲ್ಲಿ ಕನ್ನಡನಾಡಿನ ಲೇಖಕಿ ಹಾಸನದ ಬಾನು ಮುಷ್ತಾಕ್ ಅವರ ಕೃತಿ ಸ್ಥಾನ ಪಡೆದಿದೆ. ಕನ್ನಡದ ಲೇಖಕಿಯೊಬ್ಬರ ಅನುವಾದಿತ ಕೃತಿಯೊಂದು ಬೂಕರ್ ಪ್ರಶಸ್ತಿಯ ಇತಿಹಾಸದಲ್ಲೇ ಮೊದಲ ಬಾರಿಗೆ 13 ಕೃತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಬಾನು ಮುಷ್ತಾಕ್ ಅವರಿಗೆ ಸಿಎಂ ಸಿದ್ದರಾಮಯ್ಯ ಸೇರಿ ನಾಡಿನ ಗಣ್ಯರು ಶುಭಾಶಯ ತಿಳಿಸಿದ್ದಾರೆ.

ಹಾಸನದ ವಕೀಲೆ, ಚಿಂತಕಿ ಬಾನು ಮುಷ್ತಾಕ್ ಪತ್ರಕರ್ತೆಯಾಗಿಯೂ ಗಮನ ಸೆಳೆದವರು. ಸಾಹಿತ್ಯಿಕವಾಗಿಯೂ ಸಾಕಷ್ಟು ಕೆಲಸ ಮಾಡಿರುವ ಇವರಿಗೆ ಸಾಕಷ್ಟು ಪ್ರಶಸ್ತಿಗಳು ಒಲಿದು ಬಂದಿವೆ. ಬಾನು ಮುಷ್ತಾಕ್ ಅವರ ‘ಹಸೀನ’ ಮತ್ತು ಇತರ ಕತೆಗಳನ್ನು ಪತ್ರಕರ್ತೆ ದೀಪಾ ಭಕ್ತಿಯವರು ಇಂಗ್ಲಿಷ್​ಗೆ ಅನುವಾದಿಸಿದ್ದು, ‘ಹಾರ್ಟ್ ಲ್ಯಾಂಪ್’ ಕೃತಿ ಪ್ರತಿಷ್ಟಿತ ಬೂಕರ್ ಅವಾರ್ಡ್ ಅಂತಿಮ ಪಟ್ಟಿ ತಲುಪಿದೆ. ಕಳೆದ ವರ್ಷ ಇದೇ ಕೃತಿಗೆ ಪ್ರತಿಷ್ಠಿತ ಪೆನ್ ಅವಾರ್ಡ್ ಕೂಡ ಲಭಿಸಿತ್ತು.

ಇಂಗ್ಲೆಂಡ್​​ನಲ್ಲಿ ಪ್ರದಾನ ಮಾಡುವ ಬೂಕರ್ ಪ್ರಶಸ್ತಿಗೆ ಆರಂಭದಲ್ಲಿ 154 ಕೃತಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ತೀರ್ಪುಗಾರರು ಪರಾಮರ್ಶೆ, ಅಧ್ಯಯನದ ಬಳಿಕ ಅಂತಿಮವಾಗಿ 13 ಕೃತಿಗಳನ್ನು ಲಾಂಗ್ ಲಿಸ್ಟ್ ಮಾಡುತ್ತಾರೆ. ಈ ಬಾರಿ ‘ಹಾರ್ಟ್ ಲ್ಯಾಂಪ್’ ಕೃತಿ ಕೂಡ ಸ್ಥಾನ ಪಡೆದಿದೆ.

ಅಂತಿಮವಾಗಿ ಆಯ್ಕೆ ಮಾಡಲಾದ 13 ಕೃತಿಗಳ ಮತ್ತೊಂದು ಸುತ್ತಿನ ಮೌಲ್ಯಮಾಪನ ನಡೆಯಲಿದ್ದು 6 ಕೃತಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ಈ ಪಟ್ಟಿ ಏಪ್ರಿಲ್ 8ಕ್ಕೆ ಹೊರಬೀಳಲಿದೆ. ಅಂತಿಮ ಸುತ್ತಿಗೆ ಆಯ್ಕೆಯಾದ 6 ಕೃತಿಗಳಲ್ಲಿ ಒಂದು ಕೃತಿ ಬೂಕರ್ ಅವಾರ್ಡ್​ಗೆ ಆಯ್ಕೆಯಾಗಲಿದ್ದು, ಮೇ ತಿಂಗಳಿನಲ್ಲಿ ಲಂಡನ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

Related Posts

Leave a Reply

Your email address will not be published. Required fields are marked *