Monday, September 22, 2025
Menu

ಮೈಸೂರಿನಲ್ಲಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮೂಲಕ ದಸರಾಗೆ ಚಾಲನೆಯಿತ್ತ ಬಾನು ಮುಷ್ತಾಕ್‌

ಯುವ ಶಕ್ತಿಯೊಂದಿಗೆ ಸೇರಿ ಮಾನವೀಯ ಮೌಲ್ಯಗಳ ಪ್ರೀತಿಯ ಹೊಸ ಸಮಾಜವನ್ನು ಕಟ್ಟೋಣ. ಅದರಲ್ಲಿ ಎಲ್ಲರಿಗೂ ಸಮಪಾಲು, ಸಮಬಾಳು ಇರಲಿ. ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಒಂದು ಚಿಗುರು ನಮ್ಮ ಎದೆಯಲ್ಲಿ ಒಡೆಯಲಿ ಸೌಹಾರ್ದವೇ ನಮ್ಮ ಶಕ್ತಿ,  ನಮ್ಮ ಸಂಸ್ಕೃತಿ ನಮ್ಮ ಬೇರು, ಆರ್ಥಿಕತೆಯೇ ನಮ್ಮ ರೆಕ್ಕೆ ಎಂದು ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಹೇಳಿದರು.

ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ಚಾಲನೆ ನೀಡಿ ಮಾತನಾಡಿದ ಅವರು, ಚಾಮುಂಡೇಶ್ವರಿ ಎಂದರೆ ಹೆಣ್ಣಿನಲ್ಲಿರುವ ಅಪಾರ ಶಕ್ತಿ. ಸ್ತ್ರೀತ್ವ ಎಂದರೆ ಮೃದುತ್ವ, ತಾಳ್ಮೆ ಮಾತ್ರ ಅಲ್ಲ, ಗಟ್ಟಿ ಬದುಕಿನ ಹೋರಾಟ ಎಂಬುದನ್ನು ನಾವು ಅರಿಯಬೇಕಿದೆ. ಮೈಸೂರಿನ ಒಡೆಯರ್ ಅರಸೊತ್ತಿಗೆಯಲ್ಲಿ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಔದಾರ್ಯಕ್ಕೆ ಮಾದರಿಯಾಗಿದ್ದರು ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬುಕರ್ ಬಾನು ಬದುಕು ಬರಹ ಎಂಬ ಪುಸ್ತಕ ಪ್ರಕಟವಾಗುತ್ತಿದೆ. ಅದರಲ್ಲಿ ನನ್ನ ಆತ್ಮಕಥೆಯ ಒಂದು ಭಾಗ ಪ್ರಕಟವಾಗಲಿದೆ. ಅದರಲ್ಲಿ ನನ್ನ ಮತ್ತು ಹಿಂದು ಧರ್ಮದೊಂದಿಗಿನ ಸಂಬಂಧ, ಬಾಂಧವ್ಯ ಹೇಗಿದೆ ಎಂಬುದನ್ನು ನಾನು ಬರೆದಿದ್ದೇನೆ ಎಂದು ತಿಳಿಸಿದರು.

ಒಬ್ಬ ಮುಸ್ಲಿಂ ಹೆಣ್ಣುಮಗಳು ಬಾಗಿನ ಪಡೆದಾಗ ಅವರ ಮನಸ್ಸಿನಲ್ಲಿ ಉತ್ಪನ್ನವಾಗುವ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಈ ಕವನವೊಂದನ್ನು ಸೊಗಸಾಗಿ ವಾಚನ ಮಾಡಿದರು.  ಎಷ್ಟೇ ಸವಾಲುಗಳು ಬಂದರೂ ಕೂಡ ದಿಟ್ಟವಾಗಿ ನಿಂತು ನನ್ನನ್ನು ಆಹ್ವಾನಿಸಿ, ಈ ಕಾರ್ಯಕ್ರಮದಲ್ಲೊ ನಾನು ಭಾಗವಹಿಸಲಿಕ್ಕೆ ಕರ್ನಾಟಕ ಸರ್ಕಾರದ ಪರವಾಗಿ ನನಗೆ ಆಹ್ವಾನ ನೀಡಿ, ನೈತಿಕ ಬೆಂಬಲ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

ಸಿಎಂ ಸಿದ್ದರಾಮಯ್ಯ ಬಾನು ಮುಷ್ತಾಕ್ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದರು, ಚಾಮುಂಡೇಶ್ವರಿ ಪೂಜೆಯಲ್ಲಿ ಪಾಲ್ಗೊಂಡ ಬಾನು ಮುಷ್ತಾಕ್‌ ಅವರು ಆರತಿ ಸ್ವೀಕರಿಸಿ, ನಮಸ್ಕರಿಸಿದ್ದು, ಚಾಮುಂಡೇಶ್ವರಿ ದೇವಿ ಕಡೆಯಿಂದ ನೀಡಲಾದ ಸೀರೆಯನ್ನು ಸ್ವೀಕರಿಸಿದರು.

Related Posts

Leave a Reply

Your email address will not be published. Required fields are marked *