ವಿಜಯಪುರದ ಡಿಯ ಡಿವೈಎಸ್ಪಿ ಕಚೇರಿ ಪಕ್ಕ ಹಲವು ವರ್ಷಗಳಿಂದ ಎಳನೀರು ಮಾರಿಕೊಂಡಿದ್ದ ಮಹಿಳೆ ಬ್ಯಾಂಕ್ ಮ್ಯಾನೇಜರ್‌ನನ್ನು ಹನಿಟ್ರಾಪ್ ಮಾಡಿ ಬೆದರಿಸಿ ಹಣ ಸುಲಿಗೆಗೆ ಯತ್ನಿಸಿ ಅರೆಸ್ಟ್ ಆಗಿದ್ದಾಳೆ. ಪ್ರಕರಣ ಸಂಬಂಧ ಆರೋಪಿ ಮಹಿಳೆ, ಆಕೆಯ ಮಗ ಹಾಗೂ ಯ್ಯೂಟೂಬ್ ಪತ್ರಕರ್ತನನ್ನೂ ಬಂಧಿಸಲಾಗಿದೆ.
ಇಂಡಿ ಪಟ್ಟಣದ ಡಿವೈಎಸ್ಪಿ ಕಾರ್ಯಾಲಯದ ಪಕ್ಕ ಎಳನೀರು ಮಾರುತ್ತಿದ್ದ ಸುವರ್ಣ ಹೊನಸೂರೆ ಎಳನೀರು ಕುಡಿಯಲು ಬರುತ್ತಿದ್ದ ಅಂಜುಟಗಿ ಗ್ರಾಮದ ನಿವಾಸಿ ಬ್ಯಾಂಕ್ ಮ್ಯಾನೇಜರ್ ಪ್ರತಾಪ ಎಂಬವನಿಗೆ ನವೆಂಬರ್ 1ರಂದು ಬರ್ರೀ ಸರ್ ಎಂದು ಕರೆದಿದ್ದಾಳೆ, ಪುಸಲಾಯಿಸಿದ್ದಾಳೆ. ಮಹಿಳೆ ಮಾತುನಂಬಿ ಬಂದ ಬ್ಯಾಂಕ್ ಮ್ಯಾನೇಜರನನ್ನು ತನ್ನ ಗೆಳತಿಯ ಮನೆಗೆ ಕರೆದುಕೊಂಡು ಹೋಗಿ ದೈಹಿಕ ಸಂಪರ್ಕ ಬೆಳೆಸಿದ್ದಾಳೆ. ನ.5ರಂದು ಬ್ಯಾಂಕ್ ಮ್ಯಾನೇಜರ್‌ಗೆ ಕರೆ ಮಾಡಿದ ವಂಚಕಿ, ನಮ್ಮ ಪ್ರಣಯ ದೃಶ್ಯವನ್ನು ಪತ್ರಕರ್ತರು ವೀಡಿಯೊ ಮಾಡಿಕೊಂಡು ಬೆದರಿಕೆ ಹಾಕುತ್ತಿದ್ದಾರೆ. ಅವರನ್ನು ಭೇಟಿಯಾಗಿ ವ್ಯವಹಾರ ಬಗೆಹರಿಸಿಕೊಳ್ಲೂ ಎಂದಿದ್ದಾಳೆ.
ಬ್ಯಾಂಕ್ ಮ್ಯಾನೇಜರ್ ಜೊತೆಗಿನ ಸರಸದ ವೀಡಿಯೊವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದ ಮಹಿಳೆ ಮಹೇಶ ಬಗಲಿ, ಯೂಟ್ಯೂಬರ್ ಹಾಗೂ ಹೋಮಗಾರ್ಡ್ ಆಗಿರುವ ತೌಸಿಫ್ ಖರೋಶಿ ಎಂಬವರಿಂದ ಫೋನ್ ಮಾಡಿಸಿ 10 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು. ಇದರಲ್ಲಿ ಆಕೆಯ ಮಗ ಅಮೂಲ್ ಹೊನಸೂರೆ ಕೂಡ ಭಾಗಿಯಾಗಿದ್ದಾನೆ.
ಹನಿಟ್ರಾಪ್ ಕುರಿತು ನ.12ರಂದು ದೂರು ದಾಖಲಿಸಿಕೊಂಡ ಇಂಡಿ ಪೊಲೀಸರು ಆರೋಪಿ ಮಹಿಳೆ, ಆಕೆಯ ಮಗ ಅಮೂಲ್ ಹೊನಸೂರೆ, ಮಹೇಶ ಬಗಲಿ ಹಾಗೂ ಪತ್ರಕರ್ತ ಎಂದು ಹೇಳಿಕೊಂಡ ತೌಶಿಫ್ ಖರೋಶಿಯನ್ನು ಬಂಧಿಸಿದ್ದಾರೆ.
ಬ್ಯಾಂಕ್ ಮ್ಯಾನೇಜರ್ ಆರೋಪಿ ಮಹಿಳೆ ಹಾಗೂ ಆಕೆಯ ಸಂಗಡಿಗರು ಸೇರಿ ಹನಿಟ್ರಾಪ್ ಮಾಡಿ 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿರುವ ಕುರಿತು ಇಂಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾಲ್ವರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ. ಇವರಿಂದ ಇನ್ನೂ ಯಾರಿಗಾದರೂ ವಂಚನೆಯಾಗಿದ್ದರೆ ದೂರು ದಾಖಲಿಸಿದರೆ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ.


